HOSANAGARA ; ನಕಲಿ ಹಕ್ಕುಪತ್ರ ತಯಾರಿಸಿ, ಜನರನ್ನು ವಂಚಿಸುತ್ತಿದ್ದ ಪ್ರಕರಣವೊಂದನ್ನು ತಹಸೀಲ್ದಾರ್ ರಶ್ಮಿ ಹಾಲೇಶ್ ಬೇಧಿಸಿದ್ದಾರೆ.
ಹೌದು, ಇಲ್ಲಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೆಕೊಪ್ಪದ ರಾಜೇಂದ್ರ ಎಂಬಾತ ನಕಲಿ ಹಕ್ಕುಪತ್ರ ಹಾಗು ಸರ್ಕಾರಿ ದಸ್ತಾವೇಜುಗಳ ನಕಲಿ ದಾಖಲೆ ಸೃಷ್ಠಿಸಿ ಮಾರುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದರು. ಈ ವೇಳೆ ಆರೋಪಿಯ ಮನೆಯಲ್ಲಿ 48 ವಿವಿಧ ಸೀಲ್, ನೂರಾರು ನಕಲಿ ಹಕ್ಕುಪತ್ರಗಳು, ಹಕ್ಕುಪತ್ರ ಮುದ್ರಿಸುವ ಕಾಗದ, ನಕಲಿ ಸರ್ಕಾರಿ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ಣಾಟಕ ಬ್ಯಾಂಕ್, ಉಪನೊಂದಣಾಧಿಕಾರಿಗಳ ಕಛೇರಿ, ತಹಸೀಲ್ದಾರ್, ತಾಲೂಕು ಕಛೇರಿ, ನ್ಯಾಯಾಲಯ, ವಿವಿಧ ಗ್ರಾಮ ಪಂಚಾಯಿತಿ ಕಛೇರಿಗಳ ನಕಲಿ ಮೊಹರು ಪತ್ತೆಯಾಗಿವೆ. ಅಲ್ಲದೇ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ಸಮಯದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಂಕರಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಕಂದಾಯ ಇಲಾಖೆಯ ಶಿರಸ್ತೆದಾರ್ ಮಂಜುನಾಥ್, ಸುಧೀಂದ್ರ ಕುಮಾರ್, ಕಂದಾಯ ನಿರೀಕ್ಷಕ ಆಂಜನೇಯ, ಗ್ರಾಮ ಲೆಕ್ಕಾಧಿಕಾರಿ ರೇಣುಕಯ್ಯ, ಚಿರಾಗ್, ನಾಗಪ್ಪ, ಅಮ್ಜದ್ ಖಾನ್, ಶಿವಪ್ಪ ಅಶೋಕ ಇನ್ನೂ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.
ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಕಲಿ ಹಕ್ಕುಪತ್ರಗಳು ಸೇರಿದಂತೆ ಕೆಲವು ದಸ್ತಾವೇಜುಗಳು ಹರಿದಾಡುತ್ತಿರುವ ಕುರಿತು ಆಗಾಗ್ಗೆ ಆರೋಪಗಳು ಕೇಳಿಬರುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಾರ್ವಜನಿಕರಿಂದ ಸಾವಿರಾರು ರೂ. ಹಣ ಪಡೆದು ನೈಜ ದಾಖಲೆ ಎಂದು ನಂಬಿಸಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಯು ಅಮಾಯಕ ಜನರಿಂದ ಪ್ರತಿ ಹಕ್ಕುಪತ್ರಕ್ಕೆ 25 ಸಾವಿರ ರೂ. ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದಾರೆ.
ಪಿಡಿಓಗಳು ಎಚ್ಚರದಿಂದ ಕಾರ್ಯನಿರ್ವಹಿಸಿ :
ಹತ್ತಾರೂ ವರ್ಷಗಳಿಂದ ನಕಲಿ ಹಕ್ಕು ಪತ್ರಗಳ ದೂರುಗಳು ಜನರಲ್ಲಿ ಕಾಣಿಸಿಕೊಂಡಿದ್ದು ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಲ್ಲಿ ನಕಲಿ ಹಕ್ಕು ಪತ್ರ ಪಡೆದುಕೊಂಡು 9/11 ಮಾಡಿಸಿಕೊಂಡಿರಬಹುದು. ಅದನ್ನು ಪತ್ತೆ ಹಚ್ಚುವ ಕೆಲಸ ಆಯಾಯಾ ಗ್ರಾಮ ಪಂಚಾಯತಿಯ ಪಿಡಿಓಗಳ ಕೆಲಸವಾಗಿದ್ದು ಅದರ ಜೊತೆಗೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ನಕಲಿ ಹಕ್ಕು ಪತ್ರ ನೀಡಿ ಖಾತೆ ಮಾಡಿಸಿಕೊಳ್ಳಲು ಆಗಮಿಸುವ ಖಾತೆದಾರರಿಗೆ ನಕಲಿ ಹಕ್ಕುಪತ್ರವೋ ಅಥವಾ ಅಸಲಿ ಹಕ್ಕುಪತ್ರವೋ ತಿಳಿದಿರುವುದಿಲ್ಲ. ಗ್ರಾಮ ಪಂಚಾಯತಿಯ ಪಿಡಿಓಗಳು ಖಾತೆ ಮಾಡುವ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಕಛೇರಿಯಿಂದ ತಾವೇ ಖುದ್ದಾಗಿ ನೈಜತೆಯ ಪ್ರಮಾಣ ಪತ್ರ ಪಡೆದು ಖಾತೆ ಮಾಡುವುದು ಉತ್ತಮ. ಇಲ್ಲವಾದರೇ ಈ ದಂಧೆಯಲ್ಲಿ ಪಿಡಿಓಗಳ ಪಾತ್ರ ಇದೆ ಎಂದು ಮುಂದಿನ ದಿನದಲ್ಲಿ ಕೇಸ್ ದಾಖಲಾದರೂ ಆಶ್ಚರ್ಯಪಡಬೇಕಾಗಿಲ್ಲ.