ರಿಪ್ಪನ್‌ಪೇಟೆ ; ಇಲ್ಲಿನ ಠಾಣೆಯಲ್ಲಿ ಕಳೆದ ಎರಡು ವರ್ಷ ಕಾಲ ಜನಸ್ನೇಹಿ ಪಿಎಸ್‌ಐ ಯಾಗಿ ಕರ್ತವ್ಯ ನಿರ್ವಹಿಸಿ ಈಗ ಆನಂದಪುರ ಠಾಣೆಗೆ ವರ್ಗಾವಣೆಗೊಂಡ ಪಿಎಸ್‌ಐ ಪ್ರವೀಣ್ ಎಸ್.ಪಿ ಮತ್ತು ಹೊಸನಗರ ವಲಯ ಅರಣ್ಯ ಇಲಾಖೆಯ ರಿಪ್ಪನ್‌ಪೇಟೆ ವಲಯದಲ್ಲಿ ಕರ್ತವ್ಯ ನಿರ್ವಹಿಸಿ ನಗರ ವಲಯದ ನಿಟ್ಟೂರಿಗೆ ವರ್ಗಾವಣೆಯಾಗಿರುವ ಡಿಆರ್‌ಎಫ್‌ಓ ಅಕ್ಷಯ್ ಕುಮಾರ್ ಕಾರ್ಯವನ್ನು ಪ್ರಶಂಸಿಸಿ ನಾಗರೀಕರು ಇಂದು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.
ನಾಗರೀಕರ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಪ್ರವೀಣ್ ಎಸ್.ಪಿ., ಕರ್ತವ್ಯದ ಅವಧಿಯಲ್ಲಿ ಕಾನೂನು ಬಿಟ್ಟು ಯಾವುದೇ ಕಾರ್ಯ ಮಾಡಲು ಸಾಧ್ಯವಿಲ್ಲ. ಕಾನೂನಿನಡಿಯಲ್ಲಿ ಮಾನವೀಯತೆಯಿಂದ ಬರುವ ದೂರುಗಳಿಗೆ ಸ್ಪಂದಿಸಿ ಅವರಿಗೆ ಪರಿಹಾರ ಕಲ್ಪಿಸಿದಾಗ ಮಾತ್ರ ವೃತ್ತಿ ಗೌರವ ಹೆಚ್ಚಾಗಲು ಸಾಧ್ಯ ಎಂಬುದಕ್ಕೆ ಇಂದು ರಿಪ್ಪನ್‌ಪೇಟೆಯಲ್ಲಿ ನಾಗರೀಕರು ನಮ್ಮ ಸೇವಾವಧಿಯಲ್ಲಿ ಮಾಡಿರುವ ಕಾರ್ಯವನ್ನು ಗುರುತಿಸಿ ಸನ್ಮಾನಿ ಅಭಿನಂದಿಸಿರುವುದು ನನಗೆ ಇನ್ನೂ ಹೆಚ್ಚಿನ ಜನಹಿತ ಕಾರ್ಯ ಮಾಡಲು ಸ್ಪೂರ್ತಿಯಾಗಿದೆ ಎಂದರು.

ಡಿಆರ್ಎಫ್ಓ ಅಕ್ಷಯ್ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ವೃತ್ತಿ ಅಲಗಿನ ಕತ್ತಿ ಮೇಲೆ ಇದ್ದಂತೆ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಹೌದು ಎನಿಸಿಕೊಳ್ಳುವುದು ಕಷ್ಟ. ನನ್ನ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡುವ ಮೂಲಕ ಮನೆ, ಕೊಟ್ಟಿಗೆ ನಿರ್ಮಾಣಕ್ಕಾಗಿ ಮರ ಕಡಿತಲೆ ಮಾಡಿಕೊಳ್ಳುತ್ತೇವೆಂದು ಸಹಾಯ ಕೇಳಿ ಬಂದವರಿಗೆ ಆದಷ್ಟು ಒಣಗಿದ ಮರಗಳನ್ನು ಮಾತ್ರ ಬಳಸಿಕೊಳ್ಳುವಂತೆ ಮತ್ತು ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉಪಕಾರ ಮಾಡಿರುವುದೇ ನನಗೆ ಇಷ್ಟು ಗೌರವ ದೊರೆಯಲು ಕಾರಣವಾಗಿದೆ ಎಂದರು.

ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ವಹಿಸಿದ್ದರು. ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಡಿ.ಈ,ಮಧುಸೂಧನ್, ಗಣಪತಿ ಗವಟೂರು, ಆಸಿಫ್‌ಭಾಷಾ, ಜಿ.ಡಿ.ಮಲ್ಲಿಕಾರ್ಜುನ, ದೀಪಾ ಸುಧೀರ್, ಅನುಪಮ ರಾಕೇಶ್, ವೇದಾವತಿ, ಸಾರಾಭಿ, ಮಂಜುಳಾ, ವನಮಾಲ, ದಾನಮ್ಮ, ಪ್ರಕಾಶ್ ಪಾಲೇಕ್, ಪಿಡಿಒ ನಾಗರಾಜ್, ಕಾರ್ಯದರ್ಶಿ ಮಧುಶ್ರೀ, ಮುಖಂಡರಾದ ಆರ್.ಎನ್.ಮಂಜುನಾಥ, ಶ್ರೀಧರ, ಆರ್.ರಾಘವೇಂದ್ರ, ನರಸಿಂಹ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡು ವರ್ಗಾವಣೆಗೊಂಡ ಪಿಎಸ್ಐ ಮತ್ತು ಡಿಆರ್ಎಫ್ಓ ಕಾರ್ಯವನ್ನು ಪ್ರಶಂಸಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.