ಹೊಸನಗರ ; ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತ 23 ವರ್ಷಗಳಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಡಿ.ಎಸ್.ರಿಗೆ ಗ್ರಾಮ ಪಂಚಾಯತಿಯ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತ್ರಿಣಿವೆ ಗ್ರಾಮ ಪಂಚಾಯತಿಯಯ ಪಿಡಿಓ ರಂಜಿತಾ, ಸುಮಾರು 23 ವರ್ಷಗಳಿಂದ ಈ ಗ್ರಂಥಾಲಯದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಸೇವೆ ಸಲ್ಲಿಸಿ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಗ್ರಾಮ ಮಟ್ಟದ ಗ್ರಂಥಾಲಯಕ್ಕೆ ಇಂಥವರು ಇರುವುದರಿಂದ ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವುದೇ ಪುಸ್ತಕಗಳನ್ನುಬೇಕೆಂದು ಹೇಳಿದರೆ ತಕ್ಷಣ ಗ್ರಂಥಾಲಯದಲ್ಲಿ ಇರದಿದ್ದರೂ ತಮ್ಮ ಸ್ವಂತ ಹಣದಿಂದ ಸಾಗರ-ಶಿವಮೊಗ್ಗದಿಂದ ತಂದು ಓದುಗರಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇವರ ಈ ಸೇವೆ ಅನನ್ಯವಾಗಿದ್ದು ಇವರ ಮುಂದಿನ ಜೀವನ ಸುಖ-ಸಂತೋಷದಿಂದ ಇರಲೆಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಾವತಿ, ವಿಜೇಂದ್ರಚಾರ್, ಉಪಾಧ್ಯಕ್ಷ ಶ್ರೀನಿವಾಸ್ ಟಿ.ಡಿ, ಸದಸ್ಯರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಸಿಬ್ಬಂದಿಗಳಾದ ನವೀನ್, ಸುಧಾಕರ್, ಸೀತಮ್ಮ ಹಾಗೂ ರಾಘವೇಂದ್ರರ ಪತ್ನಿ ಲತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ಅಂಗವಾಗಿ ನೋಟ್‌ಬುಕ್ ವಿತರಣೆ
ಹೊಸನಗರ ; ತಾಲೂಕಿನ ಮೂಡಗೊಪ್ಪ ಗ್ರಾಮ ಪಂಚಾಯತಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 76ನೇ ಗಣರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಸರ್ವಧರ್ಮ ಸೌಹಾರ್ದ ಟ್ರಸ್ಟ್‌ನ ವತಿಯಿಂದ ಉಚಿತ ನೋಟ್‌ಬುಕ್ ಹಾಗೂ ಲೇಖನಿ ಸಾಮಾಗ್ರಿಗಳನ್ನು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ತ್ರಿಣಿವೆ ಜಯರಾಮ ಶೆಟ್ಟಿ ನೇತೃತ್ವದಲ್ಲಿ ವಿತರಿಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ಹಲಸಿನಹಳ್ಳಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಟ್ರಸ್ಟ್‌ನ ಉಪಾಧ್ಯಕ್ಷ ಆನೆಗದ್ದೆ ಆನಂದಗೌಡ, ಕಾರ್ಯದರ್ಶಿ ಅಶೋಕ ಮಾವಿನಕೊಪ್ಪ, ಶೈಲಜಾ, ಶಿಕ್ಷಕ ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಬಿ.ಆರ್.ಅಂಬೇಡ್ಕರ್ ಆದಿಜಾಂಬವ ಕ್ಷೇಮಾಭಿವೃದ್ದಿ ಸಂಘದಿಂದ ಶಾಲಾ ಆಟೋ ಚಾಲಕನಿಗೆ ಧನ ಸಹಾಯ
ಹೊಸನಗರ ; ಹೆಚ್ಚಿನ ಸಂಖ್ಯೆಯಲ್ಲಿ ದಲಿತ ವಿದ್ಯಾರ್ಥಿಗಳೇ ಅಭ್ಯಾಸ ನಿರತ ತಾಲೂಕಿನ ಮಾಸ್ತಿಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರತಿದಿನ ಮಕ್ಕಳನ್ನು ಹತ್ತಾರು ಕಿ.ಮೀ ದೂರದಿಂದ ಕರೆತರುವ ಸ್ಥಳೀಯ ಆಟೋ ಚಾಲಕನ ಕರ್ತವ್ಯಪಾಲನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ, 76ನೇ ಗಣರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಆದಿ ಜಾಂಬವ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎನ್. ಪ್ರಕಾಶ್ ಅವರು ಧನ ಸಹಾಯದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಕರಿಬಸಪ್ಪ, ರಾಜ್ಯ ಖಜಾಂಚಿ ಕೀರ್ತಿರಾಜ್, ಭದ್ರಾವತಿ ತಾಲೂಕು ಸಂಚಾಲಕ ಎನ್.ಅಪ್ಪು, ಶಾಲೆಯ ಮುಖ್ಯ ಶಿಕ್ಷಕ ಪ್ರೇಮಲತಾ, ಶಾಲಾಭಿವೃದ್ದಿ ಸಮತಿ ಅಧ್ಯಕ್ಷೆ ರೇಷ್ಮಾ, ಉಪಾಧ್ಯಕ್ಷೆ ಶಾಂತ ಹಾಗೂ ಖೈರಗುಂದ ಗ್ರಾಮ ಪಂಚಾಯತಿ ಹಲವು ಸದಸ್ಯರು ಸೇರಿದಂತೆ ಶಿಕ್ಷಕವರ್ಗ ಹಾಜರಿದ್ದರು.