Shivamogga

ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಮತ್ತು ಮಾರ್ಗದರ್ಶನ

ಶಿವಮೊಗ್ಗ : ಸರ್ಜಿ ಫೌಂಡೇಶನ್ ಮತ್ತು ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಸಹಯೋಗದಲ್ಲಿ ಜುಲೈ 1ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಮತ್ತು ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪ ಡುಂಡಿಗೆರೆ ಮತ್ತು ನಾಗರಾಜ್ ರೆಡ್ಡಿ ಪ್ರಮುಖವಾಗಿ ಭಾಗವಹಿಸಿ ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ವಿನ್ಯಾಸ, ದೈಹಿಕ ಪರೀಕ್ಷೆಗಳ ವಿಧಾನ, ಪಠ್ಯಕ್ರಮ ವಿಶ್ಲೇಷಣೆ ಹಾಗೂ ಪರೀಕ್ಷೆ ಎದುರಿಸಲು ಅನುಸರಿಸಬೇಕಾದ ಸುಲಭ ತಂತ್ರಗಳನ್ನು ವಿವರಿಸುವರು. ಜೊತೆಗೆ ಪ್ರಸ್ತುತ ಜಾಗತಿಕ ಸ್ಪರ್ಧೆಯ ವಾಸ್ತವತೆಗಳು ಮತ್ತು ಪರೀಕ್ಷಾ ಪ್ರಕ್ರಿಯೆಯ ಇತ್ತೀಚಿನ ಬದಲಾವಣೆಗಳ ಕುರಿತಾದ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ “ಕಾಯಕಸೇತು ಪರೀಕ್ಷಾಪಥ” ಎಂಬ ಶೀರ್ಷಿಕೆಯಡಿ 30 ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವೂ ಲೋಕಾರ್ಪಣೆ ಆಗಲಿದೆ. ಇದು ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

30 ದಿನಗಳ ಆನ್‌ಲೈನ್ ತರಬೇತಿ ಜುಲೈ 29ರಿಂದ ಪ್ರಾರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ನಿಪುಣ ಉಪನ್ಯಾಸಕರಿಂದ ತರಬೇತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಮತ್ತು ಸಮಯ ನಿರ್ವಹಣಾ ಕೌಶಲ್ಯ ವೃದ್ಧಿಗಾಗಿ ಪ್ರತಿದಿನ ಹಾಗೂ ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುತ್ತದೆ. ಭಾಗವಹಿಸುವ ಅಭ್ಯರ್ಥಿಗಳಿಗಾಗಿ ಸಮಗ್ರ ‘ಸ್ಟಡಿ ಮೆಟೀರಿಯಲ್’ (ಕ್ಲಾಸ್ ನೋಟ್ಸ್) ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುವುದು.

ಅಚೀವರ್ಸ್ ಕೋಚಿಂಗ್ ಸೆಂಟರ್‌ನ ವರುಣ್ ಅವರು, ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಗ್ರಾಮೀಣ ಯುವಕರಿಗೆ ದುಬಾರಿ ತರಬೇತಿ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದ ಸಮಸ್ಯೆಯನ್ನು ಈ ಕಾರ್ಯಕ್ರಮಗಳು ಪರಿಹರಿಸುವುದಾಗಿ ತಿಳಿಸಿದ್ದಾರೆ. ಉತ್ತಮ ಮಾರ್ಗದರ್ಶನ ಮತ್ತು ಶೈಕ್ಷಣಿಕ ನೆರವಿನ ಮೂಲಕ ಜಿಲ್ಲಾ ಪದವೀಧರ ಯುವಜನತೆ ಈ ಅವಕಾಶದಿಂದ ಲಾಭ ಪಡೆಯಬೇಕು ಎಂದರು. 30 ದಿನಗಳ ಆನ್‌ಲೈನ್ ತರಬೇತಿಗೆ ಮಾತ್ರ 1,000 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸೂಚಿಸಿದರು.

ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ ಗಿರಿಮಾಜಿ ಅವರು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಚ್ಚಿಸುವ ಅಭ್ಯರ್ಥಿಗಳು ಕಾಯಕ ಸೇತು ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದಿದ್ದಾರೆ. ಅರ್ಹ ಪದವೀಧರರೇ ತರಬೇತಿಗೆ ಆಯ್ಕೆಗೊಳ್ಳಲಿದ್ದಾರೆ. ಮಲೆನಾಡು ಭಾಗದ ವಿದ್ಯಾವಂತ ಯುವಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಕಾರ್ಯಕ್ರಮ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ, ಪೂರ್ವ ವಲಯ ಅಧಿಕಾರಿ ಜೆ.ಸಿ. ಕಿರಣ್ ಕುಮಾರ್, ಹಾಗೂ ಹರ್ಷ ಕಾಮತ್, ಶಂಕರ್ ಸರ್ಜಿ, ಬಾಳೆಕಾಯಿ ಮೋಹನ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>