ಶಿವಮೊಗ್ಗ:ಮಲೆನಾಡಿನ ಮನೆಮನೆಗಳಲ್ಲಿ ಗೌರಿ ಮತ್ತು ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ನಗರದ ಮಾರುಕಟ್ಟೆಗಳಲ್ಲಿ ಭಾರೀ ಜನಸಂಚಾರ ಕಂಡುಬಂದಿದೆ. ಹಬ್ಬದ ತಯಾರಿಗಾಗಿ ಹೂವು, ಹಣ್ಣು, ಬಾಳೆದಿಂಡು, ಮಾವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ.
ಗಣೇಶ ಹಬ್ಬದ ಅಂಗವಾಗಿ ಆ.27 ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ

ನಗರದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ ಹಾಗೂ ಬಿ.ಹೆಚ್. ರಸ್ತೆಯ ವ್ಯಾಪಾರಸ್ಥರು ಹಬ್ಬದ ಹಿನ್ನಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದು, ಅಂಗಡಿಗಳಲ್ಲಿ ಖರೀದಿದಾರರ ದಟ್ಟಣೆಯಿಂದ ವ್ಯಾಪಾರಿಗಳು ತೃಪ್ತಿಯಾಗಿದ್ದಾರೆ. ಹಣ್ಣು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದ್ದು, ದರ ಏರಿಕೆಯ ನಡುವೆಯೂ “ಹಬ್ಬಕ್ಕೆ ಬೇಕಾದ ಸಾಮಾನುಗಳನ್ನಾದರೂ ಕೊಂಡುಕೊಳ್ಳಲೇಬೇಕು” ಎಂಬ ಮನೋಭಾವದಿಂದ ಜನರು ಖರೀದಿಸುತ್ತಿರುವುದು ಗಮನಾರ್ಹ.
ಸೇಬು ಕಿಲೋಗೆ 150ರಿಂದ 200 ರೂ., ದಾಳಿಂಬೆ 200 ರೂ., ದ್ರಾಕ್ಷಿ 100 ರೂ., ಮೋಸಂಬಿ 40–60 ರೂ., ಬಾಳೆಹಣ್ಣು ಕಿಲೋಗೆ 80 ರೂ. ದರ ಪಾವತಿಸಬೇಕಾಯಿತು. ಪೂಜಾ ಹಣ್ಣು ಬುಟ್ಟಿಗೆ 150 ರೂ. ಬೇಡಿಕೆ ಇತ್ತು. ಬಾಳೆದಿಂಡು ಜೋಡಿ 20–30 ರೂ., ತೆಂಗಿನಕಾಯಿ ಪ್ರತಿ ಒಂದು 70 ರೂ. ಮಾರಾಟವಾಗುತ್ತಿದೆ.

ತರಕಾರಿಗಳಲ್ಲಿ ಟೊಮೆಟೊ ಕಿಲೋಗೆ 30 ರೂ., ಆಲೂಗಡ್ಡೆ 50 ರೂ., ಹೀರೇಕಾಯಿ 50 ರೂ., ಸೌತೆಕಾಯಿ 30 ರೂ., ಬೀಟ್‌ರೂಟ್ 40 ರೂ. ದರ ದಾಖಲಾಗಿತ್ತು. ಈರುಳ್ಳಿ 100 ರೂ.ಗೆ 4 ಕಿಲೋ ಲಭ್ಯವಿದ್ದು, ಸೊಪ್ಪುಗಳು ಹೋಲಿಸಿದರೆ ಕಡಿಮೆ ದರದಲ್ಲಿ ದೊರೆಯುತ್ತಿವೆ.
ಇದೇ ವೇಳೆ ನಗರ ಹೊರವಲಯದ ಸೈನ್ಸ್ ಫೀಲ್ಡಿನಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ತಾಲ್ಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಜನರು ಆಗಮಿಸಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ವಿವಿಧ ಗಾತ್ರ ಮತ್ತು ವಿನ್ಯಾಸದ ಮೂರ್ತಿಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ.
ಹಬ್ಬದ ಪ್ರಯುಕ್ತ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್ಸುಗಳನ್ನು ಸಜ್ಜುಗೊಳಿಸಿದೆ. ಪೊಲೀಸ್ ಇಲಾಖೆ ಮಾರುಕಟ್ಟೆ, ದೇವಾಲಯ ಮತ್ತು ಸಾರಿಗೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದೆ.
ದರ ಏರಿಕೆ ಗ್ರಾಹಕರಿಗೆ ಕಂಗಾಲು ಮಾಡಿದರೂ, ಹಬ್ಬದ ಸಂಭ್ರಮ ಕಡಿಮೆಯಾಗದೆ, ಸಾಲ ಮಾಡಿಯಾದರೂ ಸಂಪ್ರದಾಯಪರವಾಗಿ ಆಚರಿಸಲೇಬೇಕೆಂಬ ಉತ್ಸಾಹದಲ್ಲಿ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650