ಶಿವಮೊಗ್ಗ

ಬದುಕು ಸಮೃದ್ಧಗೊಳ್ಳಲು ದೇವರ ಕಾರುಣ್ಯ ಬೇಕು : ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗ : ವಿದ್ಯಾ ಬುದ್ಧಿ ಕೊಟ್ಟವನು ಭಗವಂತ. ಹೃದಯ ಹೊಟ್ಟೆ ಕೊಟ್ಟವನು ಭಗವಂತ. ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ದೇವರ ಕಾರುಣ್ಯ ಕಿರಣ ಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಬುಧವಾರ ನಗರದ ಶ್ರೀ ವೀರಶೈವ ಸಾಂಸ್ಕೃತಿಕ ಭವನದ ಪಕ್ಕ ನೂತನವಾಗಿ ನಿರ್ಮಿಸಿದ ಪಶುಪತಿನಾಥ ಪಂಚಮುಖಿ ದೇವಸ್ಥಾನ ಉದ್ಘಾಟನೆ-ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ದೇವರು ಮತ್ತು ಮರಣ ಇವೆರಡನ್ನು ಎಂದಿಗೂ ಮರೆಯಬಾರದು. ಉಪಕಾರ ಮತ್ತು ಅಪಕಾರ ಮರೆತು ಬಾಳಿದರೆ ಬಾಳು ಉಜ್ವಲಗೊಳ್ಳುತ್ತದೆ. ಜೀವನದಲ್ಲಿ ದ್ವೇಷವನ್ನು ಕಳೆದುಕೊಳ್ಳದಿದ್ದರೆ ಸುಖ ಸಂತಸದ ಬಾಳು ಅರಳುವುದಿಲ್ಲ. ಬದುಕು ವಿಕಾಸಗೊಳ್ಳಲು ಆಧ್ಯಾತ್ಮದ ಅರಿವು ಬೇಕು. ನಡೆ ನುಡಿಗಳ ಜೊತೆ ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಆಧ್ಯಾತ್ಮ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶ ಸೂತ್ರಗಳನ್ನು ಬೋಧಿಸಿ ಎಲ್ಲರ ಬಾಳಿಗೆ ಬೆಳಕು ತೋರಿದ್ದಾರೆ. ವೀರಶೈವ ಕಲ್ಯಾಣ ಮಂದಿರ ಒಳ್ಳೆಯ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳನ್ನು ಮಾಡುತ್ತಿರುವುದು ತಮಗೆ ಸಂತಸ ತಂದಿದೆ. ಪಶುಪತಿನಾಥ ಪಂಚಮುಖಿ ದೇವಸ್ಥಾನ ಸುಂದರವಾಗಿ ನಿರ್ಮಾಣಗೊಂಡಿದೆ ಎಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಾಗರೀಕತೆಯ ಹೆಸರಿನಲ್ಲಿ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು. ಅರಿವು ಆಚಾರಗಳ ಸಂಗಮದಿಂದ ಸುಮಧುರ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಂತ್ರ ತೀರ್ಥ ಗುರು ದೈವ ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟು ನಡೆಯುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯುವುದರಲ್ಲಿ ಯಾವ ಸಂದೇಹವಿಲ್ಲ. ವೀರಶೈವ ಕಲ್ಯಾಣ ಮಂದಿರ ಸಂಸ್ಥೆಯಿಂದ ಕಟ್ಟಿದ ಪಶುಪತಿನಾಥ ಪಂಚಮುಖಿ ಶಿವಲಿಂಗ ಮಂದಿರ ತುಂಬಾ ಸುಂದರವಾಗಿ ನಿರ್ಮಾಣಗೊಂಡಿದೆ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಪ್ರವಾಸ ಮಾಡುವ ಮೂಲಕ ಜನಜಾಗೃತಿ ಧರ್ಮ ಜಾಗೃತಿ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಮೇ 17ರಂದು ಜರುಗುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸೋಣ ಎಂದರು.

ಮಾಜಿ ಸಂಸದ ಆಯನೂರ ಮಂಜುನಾಥ್ ಮಾತನಾಡಿ, ಪಶುಪತಿನಾಥ ಪಂಚಮುಖಿ ಶಿವಲಿಂಗ ನೇಪಾಳ ಕಠ್ಮಂಡು ಬಿಟ್ಟರೆ ದೇಶದಲ್ಲಿ ಶಿವಮೊಗ್ಗದಲ್ಲಿ ಸ್ಥಾಪಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಪಂಚಮುಖಿಗೂ ಪಂಚಾಚಾರ್ಯರಿಗೂ ನೇರ ಸಂಬಂಧವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಎಸ್.ಎಸ್.ಜ್ಯೋತಿ ಪ್ರಕಾಶ, ಬಳ್ಳೆಕೆರೆ ಸಂತೋಷ, ಶಿವಮೊಗ್ಗ ಕಲ್ಯಾಣ ಮಂಟಪಗಳ ಒಕ್ಕೂಟದ ಅಧ್ಯಕ್ಷ ಕಟ್ಟೆ ಶ್ರೀನಿವಾಸ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಷಡಕ್ಷರಿ, ಸೂಡಾ ಅಧ್ಯಕ್ಷ ಸುಂದರೇಶ ಮೊದಲಾದವರು ಇದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಎಲ್ಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಜ್ಞಾನ ಕ್ರಿಯಾತ್ಮಕವಾದ ಈ ಧರ್ಮ ಸಾಮಾಜಿಕ ಸಂವೇದನಾಶೀಲ ಗುಣಗಳನ್ನು ಹೊಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ವಿಚಾರಗಳು ಎಲ್ಲರಿಗೂ ಅನ್ವಯಿಸುತ್ತವೆ ಎಂದರು.

ಸಮ್ಮುಖ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಮತ್ತು ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಧರ್ಮ ಸಂಸ್ಕೃತಿಯ ಬಗೆಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಸಹಕರಿಸಿ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷ ಜೆ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಹೆಚ್.ಎಲ್.ರವಿ ಸ್ವಾಗತಿಸಿದರು. ಹುಮಾಯೂನ ಹರ್ಲಾಪುರ ಸಂಗಡಿಗರಿಂದ ಕಾರ್ಯಕ್ರಮ ಜರುಗಿತು. ಸಂದೀಪ ಶಾಸ್ತ್ರಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!