SHIVAMOGGA | ಕಳೆಕಟ್ಟಿದ ಗೌರಿ-ಗಣೇಶ ಹಬ್ಬದ ಸಂಭ್ರಮ, ಹೂ, ಹಣ್ಣುಗಳ ಖರೀದಿ ಭರಾಟೆ ಜೋರು, ಗಗನಕ್ಕೇರಿದ ಬೆಲೆ !

Written by malnadtimes.com

Published on:

SHIVAMOGGA | ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದ್ದು, ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿ, ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.

WhatsApp Group Join Now
Telegram Group Join Now
Instagram Group Join Now

ನಗರದ ಸೈನ್ಸ್ ಮೈದಾನ, ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್, ಟಿ.ಸೀನಪ್ಪ ವೃತ್ತ (ಗೋಪಿ ವೃತ್ತ), ವಿದ್ಯಾನಗರ, ವಿನೋಬನಗರ ಸೇರಿದಂತೆ ನಗರದ ವಿವಿಧೆಡೆ ಗಣೇಶಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿದೆ. ಹಬ್ಬದ ಹಿನ್ನಲೆ ಗ್ರಾಹಕರು ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿದರು.

ನಗರದೆಲ್ಲೆಡೆ ಹೂವು, ಹಣ್ಣು, ತರಕಾರಿ, ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು. ಇಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹಬ್ಬಗಳು ದುಬಾರಿ ಎನ್ನುವ ಭಾವನೆ ಮೂಡುತ್ತಿದೆ.
– ಸಾವಿತ್ರಮ್ಮ, ಗಾಂಧಿ ಬಜಾರ್‌ನಲ್ಲಿ ಖರೀದಿಯಲ್ಲಿ ತೊಡಗಿದ್ದ ಮಹಿಳೆ

ಜಾಗೃತಿ ಅಭಿಯಾನ :

ಪಿಒಪಿ ಗಣೇಶಮೂರ್ತಿಗಳ ಭರಾಟೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಕೇಳುವವರಿಲ್ಲ. ನಿಷೇಧ ಇದ್ದರೂ ಪಿಒಪಿ ಮೂರ್ತಿಗಳ ಅಬ್ಬರ ಕಡಿಮೆಯಾಗಿಲ್ಲ ಎಂಬುದು ಹಲವರ ದೂರು. ಈ ನಿಟ್ಟಿನಲ್ಲಿ ಕೆಲ ಸಂಘಟನೆಗಳ
ಸದಸ್ಯರು ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಪರಿಸರ ಸ್ನೇಹಿ ಗಣಪನ ಪೂಜಿಸಲು ಸೂಚಿಸಿದೆ.

ಗಣೇಶ ಉತ್ಸವ :

ಜಿಲ್ಲೆಯಲ್ಲಿ ಶನಿವಾರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗಣೇಶ ಮಂಡಳಿ ಯವರು ಗಣೇಶ ಮೂರ್ತಿ ಕೂರಿಸಲು ವೇದಿಕೆ ಸಿದ್ಧಪಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ಕೂರಿಸುವುದರಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿಯೇ ಜಿಲ್ಲೆಯ ಜನ ವರ್ಷದಿಂದ ವರ್ಷಕ್ಕೆ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಿದ್ದಾರೆ.

ವಿಭಿನ್ನ ಮೂರ್ತಿಗಳ ಆಗಮನ :

ಪಂಚಮುಖಿ ಗಣಪತಿ, ಶಿವ ತಾಂಡವ ಗಣಪತಿ, ಶಿವನ ಪೂಜಿಸುವ ಗಣಪತಿ, ರಾಘವೇಂದ್ರ ಸ್ವಾಮಿ ರೂಪದಲ್ಲಿನ ಗಣೇಶಮೂರ್ತಿ, ವಿಷ್ಣು ರೂಪದಲ್ಲಿರುವ ವಿಘ್ನೇಶ್ವರ, ಬುದ್ಧನ ರೂಪದಲ್ಲಿರುವ ಗಣೇಶಮೂರ್ತಿ ಹೀಗೆ ಭಿನ್ನ ವಿಭಿನ್ನ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ವರ್ಷದ ಗಣೇಶ ಚೌತಿಗಾಗಿಯೇ 1ರಿಂದ 6 ಅಡಿ ವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. 1,000 ರೂ. ನಿಂದ 50,000 ರೂ. ಮೊತ್ತದ ವರೆಗಿನ ಗಣೇಶಮೂರ್ತಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಗೌರಿ- ಗಣೇಶ ಹಬ್ಬದ ಹಿನ್ನಲೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಬೆಂಗಳೂರು ಸೇರಿದಂತೆ ವಿವಿಧೆಡೆ ಉದ್ಯೋಗದಲ್ಲಿರುವವರು ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ. ಹೀಗಾಗಿ ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ :

ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಗರದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ನಡೆಯಿತು. ಇಲ್ಲಿನ ರಾಮಣ್ಣ ಶ್ರೆಷ್ಠಿ ಪಾರ್ಕ್ ಬಸವೇಶ್ವರ ದೇವಸ್ಥಾನ, ವಿನೋಬನಗರ ಶಿವಾಲಯ ದೇವಸ್ಥಾನ ಸೇರಿ ವಿವಿಧ ದೇವಾಲಯಗಳಲ್ಲಿ ಮುಂಜಾನೆ ಹೆಣ್ಣು ಮಕ್ಕಳು ಗೌರಿ ಪೂಜೆ ನಡೆಸಿ ಗೌರಿಗೆ ಬಾಗಿನ ಅರ್ಪಿಸಿದರು.

ಗಗನಕ್ಕೇರಿದ ಬೆಲೆ !
ಮಾರುಕಟ್ಟೆಯಲ್ಲಿ ಸೇವಂತಿಗೆ ಕೆಜಿಗೆ 120, ಚೆಂಡು ಹೂ 80, ವಿಳ್ಯದೆಲೆ ಕಟ್ಟಿಗೆ ರೂ. 80, ಸೇಬು ಹಣ್ಣು ಕೆಜಿಗೆ 180, ಸೀತಾಫಲ ಕೆಜಿಗೆ 100, ದಾಳಿಂಬೆ ಕೆಜಿಗೆ 200ರ ಗಡಿ ದಾಟಿದೆ. ಗೌರಿ ಹಬ್ಬದಂದು ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ವಾಡಿಕೆ. ಬಿಡಿಯಾಗಿ ವಸ್ತುಗಳನ್ನು ತಂದು ಸಿದ್ಧಪಡಿಸುವಷ್ಟು ಸಮಯ ಇಲ್ಲದವರಿಗೆಂದೇ ಸಿದ್ಧವಾದ ಬಾಗಿನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಬೆಲೆ 300 ರಿಂದ ನಿಂದ 600 ವರೆಗೂ ಇದೆ.

Leave a Comment