HOSANAGARA ; ಹಿಂದೆ ಮೈಸೂರು ರಾಜ್ಯವೆಂದು ಇದ್ದ ಹೆಸರನ್ನು ಕರ್ನಾಟಕ ಎಂದು ಬದಲಾವಣೆ ಮಾಡಿ ಇಂದಿಗೆ 50 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಇದರ ನೆನಪಿಗಾಗಿ, ರಾಜ್ಯದಾದ್ಯಂತ ಕರ್ನಾಟಕ ಸುವರ್ಣ ಸಂಭ್ರಮ ರಥ ಯಾತ್ರೆ ಹಮ್ಮಿಕೊಂಡಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು.
ಶುಕ್ರವಾರ ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ತಾಯಿ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಪೂಜೆ ಸಲ್ಲಿಸಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದರು.
ಪ್ರತಿಯೊಬ್ಬರು ಕನ್ನಡ ನಾಡು-ಭಾಷೆ ಕುರಿತಂತೆ ಅಭಿಮಾನ ಬೆಳೆಸಿಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಬೇಕೆಂದ ಅವರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮಾರ್ಗವಾಗಿ ರಥಯಾತ್ರೆ ಸಾಗಿ ಬಂದಿದ್ದು ನಾಳೆ ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಗಲಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ.ನರಸಿಂಹ ಮಾತನಾಡಿ, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ರಥಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಕನ್ನಡ ಭಾಷೆಗೆ ಇರುವ ಇತಿಹಾಸ ನೆನಪಿಸಲು ಇದೊಂದು ಸುವರ್ಣ ಅವಕಾಶವಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಬೆಳವಣಿಗೆಗೆ ಇದು ಸಹಕಾರಿ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡದೇವಿ ಭುವನೇಶ್ವರಿ ಮತ್ತು ಕರ್ನಾಟಕ ಗತವೈಭವ ಸಾರುವ ಸ್ಥಬ್ದ ಚಿತ್ರದ ಜ್ಯೋತಿ ರಥಯಾತ್ರೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಸಾಗಿತು.
ಈ ಮೆರವಣಿಗೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ಶಿರಸ್ತೇದಾರ್ ರಾಕೇಶ್ ಕಟ್ಟೆ, ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ಆಂಜನೇಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶ್ವಿನಿ ಕುಮಾರ್, ಕೃಷ್ಣವೇಣಿ, ಶಾಹಿನಾ, ವಿಜೇಂದ್ರ ಶೇಟ್, ನಿವೃತ್ತ ಶಿಕ್ಷಕ ಕುಬೇಂದ್ರಪ್ಪ, ರಿಪ್ಪನ್‌ಪೇಟೆ ಕಸಾಪ ಘಟಕದ ಅಧ್ಯಕ್ಷ ಆರ್. ನಾಗಭೂಷಣ್, ಸಂಘಟನಾ ಕಾರ್ಯದರ್ಶಿ ಹಸನಬ್ಬ, ಖಜಾಂಚಿ ಬಿ.ಕೆ.ರಾಘವೇಂದ್ರ ಹಾಗೂ ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಸೀಮಾ ತೆಂಡುಲ್ಕರ್, ಕಂದಾಯ ಇಲಾಖೆ ಸಿಬ್ಬಂದಿಗಳಾದ ಚಿರಾಗ್ ವರ್ಣೇಕರ್, ಲೋಹಿತ್, ಸಿದ್ದಪ್ಪ, ಜಾಗೃತಿ, ಆಂಜನೇಯ ಮೊದಲಾದವರು ಇದ್ದರು.