ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಭೆ | ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಮತ್ತು ಯಶಸ್ಸಿಗೆ ಸಹಕರಿಸಿ

Written by malnadtimes.com

Published on:

SHIVAMOGGA | ಬಡ ಮತ್ತು ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಐದು ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದ್ದು, ಇನ್ನೂ ಪರಿಣಾಮಕಾರಿ ಅನುಷ್ಟಾನ ಮತ್ತು ಯಶಸ್ಸಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ (Guarantee Schemes) ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Read More:ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ? ಈ ರೀತಿ ಚೆಕ್ ಮಾಡಿ, ಅಪಾಯದಿಂದ ಪಾರಾಗಿ!

ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಈ ಐದು ಯೋಜನೆಗಳು ರಾಜ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಬಡ ಮತ್ತು ಸಾಮಾನ್ಯ ಜನರ ಬದುಕಿಗೆ ಶಕ್ತಿಯಾಗಿದೆ. ಅವರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದ್ದು ಇಂತಹ ಯೋಜನೆಗಳ ಅನುಷ್ಟಾನದಲ್ಲಿ ಎದುರಾಗುವ ಸಣ್ಣ ಪುಟ್ಟ ತಾಂತ್ರಿಕ ಮತ್ತು ಇತರೆ ದೋಷಗಳನ್ನು ಅಧಿಕಾರಿಗಳು ಸರಿಪಡಿಸಿಕೊಂಡು ಮತ್ತು ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ಮಾತನಾಡಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಾಧಿಕಾರ ಸಮಿತಿ ರಚನೆಯಾಗಿದ್ದು ಜಿಲ್ಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ಸೇರಿ 21 ಪದಾಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದಲ್ಲಿ ಇಓ ಗಳು ಸದಸ್ಯ ಕಾರ್ಯದರ್ಶಿಗಳಿದ್ದು 15 ಜನ ಪದಾಧಿಕಾರಿಗಳಿರುತ್ತಾರೆ. ಪದಾಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆ :

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ದಿ: 11-06-2023 ರಿಂದ 23-06-2024 ರವರೆಗೆ ಜಿಲ್ಲೆಯಲ್ಲಿ 2,38,94,869 ಮಹಿಳಾ ಪ್ರಯಾಣಿಕರು ಅಂದರೆ ಶೇ.59.9 ಮಹಿಳೆಯರು ಪ್ರಯಾಣಿಸಿರುತ್ತಾರೆ. ರೂ.84,19,75,141 ಶೇ.42.1 ಯೋಜನೆಯಿಂದ ಆದಾಯ ಸಂದಾಯವಾಗಿರುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ಕೆಎಸ್‍ಆರ್‍ಟಿಸಿ ಬಸ್‍ಗಾಗಿ 145 ಅರ್ಜಿಗಳು ಈವರೆಗೆ ಬಂದಿರುತ್ತವೆ. ಕೆಲವೆಡೆ ಹೊಸ ಬಸ್ ಬಿಡಲಾಗಿದೆ. ಸಂಪನ್ಮೂಲ ಕೊರತೆಯಿಂದ ಹಲವು ಕಡೆ ಬಸ್ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಕೆ.ಎಸ್‍.ಆರ್‍.ಟಿ.ಸಿ ಅಧಿಕಾರಿ ಮಾಹಿತಿ ನೀಡಿದರು.

ಪ್ರಾಧಿಕಾರದ ಸದಸ್ಯರು ಮಾತನಾಡಿ, ಹೊಸನಗರ ತಾಲ್ಲೂಕಿಗೆ ಕೆ.ಎಸ್‍.ಆರ್‍.ಟಿ.ಸಿ ಬಸ್ ಸೌಲಭ್ಯವಿಲ್ಲ. 4 ಬಸ್‍ಗಳನ್ನು ಹೊಸನಗರಕ್ಕೆ ಒದಗಿಸಬೇಕು ಎಂದು ಮನವಿ ಮಾಡಿದರು.

ಗೃಹಜ್ಯೋತಿ ಯೋಜನೆ :

ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾದ ಮನೆಗಳಿಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ದಿ: 01-07-2023 ರಿಂದ 2024 ರ ಮೇ ಮಾಹೆವರೆಗೆ 451848 ಗೃಹಜ್ಯೋತಿ ಬಿಲ್ ನೀಡಿದ್ದು ರೂ.213950125 ಮೊತ್ತದ ಸಬ್ಸಿಡಿ ನೀಡಲಾಗಿದೆ ಎಂದು ಮೆಸ್ಕಾಂ ಡಿಸಿ ಸಭೆಗೆ ಮಾಹಿತಿ ನೀಡಿದರು.

ಪ್ರಾಧಿಕಾರದ ಉಪಾಧ್ಯಕ್ಷರು ಮಾತನಾಡಿ, ಗ್ರಾಹಕರು ಬಿಲ್ ಪಾವತಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಲೈನ್‍ಮನ್‍ಗಳು ಸಂಪರ್ಕ ಕಡಿತಕ್ಕೆ ಮುಂದಾಗುತ್ತಿದ್ದು, ಮಾನವೀಯತೆ ದೃಷ್ಟಿಯಿಂದ ಒಂದು-ಎರಡು ದಿನ ಬಿಲ್ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಅನ್ನಭಾಗ್ಯ ಯೋಜನೆ :

ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ವಿತರಸಬೇಕಿದ್ದು, ಅಕ್ಕಿ ಕೊರತೆ ಕಾರಣ ಎನ್‍ಎಫ್‍ಎಸ್‍ಸಿ ಯ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲು ತಲಾ ಸದಸ್ಯರಿಗೆ ರೂ.170 ರಂತೆ ಏಪ್ರಿಲ್‍ವರೆಗೆ ನಗದು ಪಾವತಿಸಲಾಗಿದೆ. ಒಟ್ಟು 359890 ಅರ್ಹ ಪಡಿತರ ಚೀಟಿದಾರರಿಗೆ ಡಿಬಿಟಿ ಮುಖಾಂತರ ರೂ.203912960 ನಗದು ಪಾವತಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಅವಿನ್ ಮಾಹಿತಿ ನೀಡಿದರು.

Read More:LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

ಸದಸ್ಯರು ಪ್ರತಿಕ್ರಿಯಿಸಿ, ವಯಸ್ಸಾದ ಹಲವರ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಕೊನೆಯಲ್ಲಿ ಕೇವಲ 2 ರಿಂದ 3 ದಿನ ಮಾತ್ರ ಪಡಿತರ ವಿತರಣೆಯಾಗುತ್ತಿದೆ. ಅನರ್ಹ ಪಡಿತರ ಚೀಟಿದಾರರ ದೋಷಗಳನ್ನು ಸರಿಪಡಿಸಿ ಸೌಲಭ್ಯ ನೀಡಬೇಕಿದೆ. ಹಾಗೂ ಬಿಪಿಎಲ್‍ಗೆ ಅರ್ಹರಿದ್ದವರನ್ನೂ ಹಿಂದೆ ಪಡೆಯಲಾದ ತಪ್ಪು ಮಾಹಿತಿಯಿಂದ ಎಪಿಎಲ್ ಕಾರ್ಡ್ ನೀಡಲಾಗಿದೆ. ಪ್ರತಿ ತಾಲ್ಲೂಕಿನಿಂದ ಹೀಗೆ ಬಿಪಿಎಲ್ ಕಾರ್ಡ್‍ಗೆ ಅರ್ಹರಿರುವವರ ಮಾಹಿತಿ ಪಡೆದು ಬಿಪಿಎಲ್ ಕಾರ್ಡ್ ನೀಡಲು ಸರ್ಕಾರಕ್ಕೆ ಸಲ್ಲಿಸಬೇಕು. ಹಾಗೂ ಹೊಸ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಗೃಹಲಕ್ಷ್ಮಿ ಯೋಜನೆ:

ಜಿಲ್ಲೆಯಲ್ಲಿ ಮೇ ಮಾಹೆವರೆಗೆ 384570 ಮಹಿಳೆಯರು ಈ ಯೋಜನೆಯಡಿ ನೋಂದಣಿಯಾಗಿದ್ದು 380997 ಮಹಿಳೆಯರಿಗೆ ಮೇ ಮಾಹೆವರೆಗೆ ಸೌಲಭ್ಯ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಮಾಹಿತಿ ನೀಡಿದರು.

ಸದಸ್ಯರು, ಬ್ಯಾಂಕ್ ಸಾಲ ಮತ್ತು ಇತರೆ ಯಾವುದೋ ಸಂದರ್ಭದಲ್ಲಿ ಐ.ಟಿ ಮತ್ತು ಜಿ.ಎಸ್.ಟಿ ಪಾವತಿಸಿರುವ ಕಾರಣಕ್ಕಾಗಿ ಹಲವು ಅರ್ಜಿದಾರರಿಗೆ ಸೌಲಭ್ಯ ನೀಡಲಾಗಿಲ್ಲ. ಇಂತಹವರನ್ನು ಗುರುತಿಸಿ ಸೌಲಭ್ಯ ನೀಡಬೇಕು. ಮರಣ ಹೊಂದಿದ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ರಾಜ್ಯಕ್ಕೆ ಕಳುಹಿಸಿ ಕುಟುಂಬದ ಅರ್ಹ ಯಜಮಾನಿಗೆ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ತಿಳಿಸಿದರು.

ಯುವನಿಧಿ :

ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ದಿ: 26-12-2023 ರಿಂದ 24-06-2024 ರವರೆಗೆ ಒಟ್ಟು 5389 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಅರ್ಹ 695 ವಿದ್ಯಾರ್ಥಿಳಿಗೆ ಸೌಲಭ್ಯವನ್ನು ನೀಡಲಾಗಿದೆ ಎಂದು ಉದ್ಯೋಗಾಧಿಕಾರಿ ತಿಳಿಸಿದರು.

2022-23 ರಲ್ಲಿ ಪದವಿ ಪಡೆದ ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ಇನ್ನೂ ಸೌಲಭ್ಯ ಲಭ್ಯವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯಿಂದ ನೀಡಲಾಗುವ ಕೌಶಲ್ಯಾಭಿವೃದ್ದಿ ತರಬೇತಿಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಪ್ರಚಾರ ನೀಡುವಂತೆ ಸದಸ್ಯರು, ಪದಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಜುಲೈ 5 ರೊಳಗೆ ತಾಲ್ಲೂಕು ಪ್ರಾಧಿಕಾರಗಳು ಸಭೆಯನ್ನು ನಡೆಸಬೇಕು. ಪ್ರಾಧಿಕಾರಕ್ಕೆ ತಾಲ್ಲೂಕುಗಳಲ್ಲಿ ಕಚೇರಿ ಮತ್ತು ಮೂಲಭೂತ ಸೌಕರ್ಯ ಕೇಳಿದ್ದು, ಒದಗಿಸಲು ಕ್ರಮ ವಹಿಸಲಾಗುವುದು. ಗೃಹಲಕ್ಷಿ ಮತ್ತು ಅನ್ನಭಾಗ್ಯ ಯೋಜನೆಯಡಿಯ ಎನ್‍ಪಿಸಿಎಲ್ ಪೋರ್ಟಲ್ ಸಮಸ್ಯೆ ಇತರೆ ತಾಂತ್ರಿಕ ಸಮಸ್ಯೆಗಳ ಕಡೆ ಅಧಿಕಾರಿಗಳು ಗಮನ ಹರಿಸಿ ಫಲಾನುಭವಿಗಳಿಗೆ ಸಹಕರಿಸಬೇಕು. ನ್ಯಾಯ ಬೆಲೆ ಅಂಗಡಿಗಳು ಪ್ರತಿ ದಿನ ತೆರೆದು ಪಡಿತರ ವಿತರಣೆ ಮಾಡುವಂತೆ ಮತ್ತು ಪ್ರಾಧಿಕಾರ ಸೂಚಿಸಿದ ಇತರೆ ವಿಷಯಗಳು, ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರು, ಸದಸ್ಯ ಕಾರ್ಯದರ್ಶಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

Read More:Karnataka Rain | ಇನ್ನೆರಡು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ

Leave a Comment