ಕಳಸ ; ಇತಿಹಾಸ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಶ್ರೀ ಸುಬ್ರಹ್ಮಣೈಶ್ವರ ಸ್ವಾಮಿಯವರ ರಥೋತ್ಸವವು ಬುಧವಾರ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.
ಮಧ್ಯಾಹ್ನ ಮಂಗಳಾರತಿ ಮುಗಿದ ಬಳಿಕ ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ಹೊತ್ತುಕೊಂಡು ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ದೇವಸ್ಥಾನದಲ್ಲಿ ಸುತ್ತು ಸೇವೆ ನಡೆಸಿ, ನಂತರ ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಲಾಯಿತು.

ರಥೋತ್ಸವಕ್ಕೂ ಮುನ್ನ ರಥೋತ್ಸವ ನಡೆಯುವ ಮೊದಲು ಬ್ರಹ್ಮ ರಥದ ನೇರಕ್ಕೆ ಬಾನೆತ್ತರದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ರಥೋತ್ಸವ ಸಾಗುತ್ತಿದ್ದಂತೇ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳುಮೆಣಸು, ಏಲಕ್ಕಿ, ಅಡಿಕೆ, ಕಾಫಿ ಬೀಜ ಇನ್ನಿತರೆ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ನೆರೆದ ಸಾವಿರಾರು ಭಕ್ತಾಧಿಗಳು ರಥ ಎಳೆದು ಕೃತಾರ್ಥರಾದರು ಹಾಗೂ ಭಕ್ತರು ಕಷ್ಟಕಾಲಕ್ಕೆ ಹರಕೆ ಹೊತ್ತುಕೊಂಡ ಹಾವಿನ ಹೆಡೆ, ಹಾವಿನ ಮೊಟ್ಟೆ, ಮಗು ತೊಟ್ಟಿಲು ಮುಂತಾದ ಬೆಳ್ಳಿ ವಸ್ತುಗಳನ್ನು ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸಿದರು.
ಮಂಗಳವಾರ ಗಣಪತಿ ಹೋಮ, ದಿಂಡಿ ಉತ್ಸವದ ಮೂಲಕ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಬುಧವಾರ ಬೆಳಿಗ್ಗೆಯಿಂದಲೇ ದೇಗುಲಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಜಾತ್ರೆಯ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತಾರು ಆಗಮಿಸಿದ್ದರು.
ವರದಿ : ಪ್ರೀತಮ್ ಹೆಬ್ಬಾರ್

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





