HOSANAGARA ; ಎರಡೆರಡು ಬಾರಿ ಹೆಜ್ಜೇನು ದಾಳಿಗೆ ಒಳಗಾಗಿ ಒಟ್ಟು 7 ಮಂದಿ ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ ಚಿಕ್ಕಪೇಟೆ ಸೇತುವೆ ಬಳಿಯ ಬಾಷಾ ಎಂಬುವವರ ಮನೆ ಸಮೀಪ ಬಾಷಾ, ಅವರ ಪತ್ನಿ ಆಸ್ಮಾ, ಇಬ್ಬರು ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಿ ನಾಲ್ವರಿಗೆ ಚಿಕಿತ್ಸೆ ನೀಡಲಾಯಿತು.

ಸಂಜೆ ಮತ್ತೊಮ್ಮೆ ದಾಳಿ !
ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಬೆಳಗ್ಗೆ ದಾಳಿಗೆ ಒಳಗಾಗಿದ್ದ ಬಾಷಾ ಪುತ್ರ ಆರೀಫ್ ಮೇಲೆ, ಪಕ್ಕದ ಮನೆ ಯಾಸಿನ್ ಮೇಲೆ ಮತ್ತೆ ಹೆಜ್ಜೇನು ದಾಳಿ ನಡೆಸಿದೆ. ಈ ವೇಳೆ ಹಾಸಿಗೆ ದುರಸ್ತಿಗಾಗಿ ಬಂದಿದ್ದ ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ (68) ಮತ್ತು ಅವರ ಪುತ್ರ ಬಾಬಾ ಸಾಬ್ ಎಂಬುವವರ ಮೇಲೆ ಕೂಡ ಹೆಜ್ಜೇನು ದಾಳಿ ನಡೆಸಿದೆ.

ವೃದ್ಧ ಹುಸೇನ್ ಸಾಬ್ ಮೇಲೆ ತೀವ್ರ ದಾಳಿಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಭಾರೀ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಸ್ಥಳೀಯರ ಸಹಕಾರದಿಂದ ಅವರ ದೇಹದಿಂದ 500ಕ್ಕೂ ಹೆಚ್ಚು ಮುಳ್ಳು ಹೊರತೆಗೆಯಲಾಗಿದೆ. ಬಳಿಕ ಹೊಸನಗರ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.