ಹೊಸನಗರ ; ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಚೂಟ್ ಕೈಕೊಟ್ಟ ಹಿನ್ನಲೆ ಮೃತರಾಗಿದ್ದ ಉತ್ತರ ಪ್ರದೇಶದ ಆಗ್ರ ವಾಯುಸೇನೆ ಪಿಟಿಎಸ್ ತರಬೇತಿ ಕೇಂದ್ರದ ಅಧಿಕಾರಿ ಜಿ.ಎಸ್.ಮಂಜುನಾಥ್ ಅವರ ಕಳೆಬರಹ ಶನಿವಾರ ರಾತ್ರಿ ಬೆಂಗಳೂರು ತಲುಪಿ, ಬಳಿಕ ಶಿವಮೊಗ್ಗ ಮೂಲಕ ಭಾನುವಾರ ಬೆಳಗ್ಗೆ 10-30ರ ಸುಮಾರಿಗೆ ಪಟ್ಟಣ ತಲುಪಿತು.

ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಕೃಷಿಕ ಜಿ.ಎಂ. ಸುರೇಶ್ ಪುತ್ರ ಮೃತ ಯೋಧ ಜೆ.ಎಸ್ ಮಂಜುನಾಥ್ (36) ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಪಟ್ಟಣದಲ್ಲಿ ನೆರೆದಿದ್ದರು.

ಮೃತರ ಕಳೆಬರಹ ಹೊತ್ತ ಭಾರತೀಯ ಸೇನಾ ವಾಹನ ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮೀಪ ಆಗಮಿಸುತ್ತಿದ್ದಂತೆ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಇಲಾಖಾ ಸಿಬ್ಬಂದಿಗಳು, ಸಾವಿರಾರು ನಾಗರೀಕರು ರಸ್ತೆಯ ಇಕ್ಕೆಲ ನಿಂತು ‘ವೀರ ಯೋಧ ಮಂಜುನಾಥ್ ಅಮರ್ ರಹೇ’ ಎಂಬ ಘೋಷಣೆ ಕೂಗುತ್ತ ಮೃತನ ಕಳೆಬರಹಕ್ಕೆ ಪುಷ್ಪ ನಮನದ ಮೂಲಕ ಅಶ್ರುತರ್ಪಣ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.

ಮೃತ ಸೈನಿಕನ ಮೆರವಣಿಗೆಯು ಪಟ್ಟಣದ ಕೊಡಚಾದ್ರಿ ಕಾಲೇಜಿನಿಂದ ಆರಂಭಗೊಂಡು ಮಾವಿನಕೊಪ್ಪ ಸರ್ಕಲ್, ಹಳೇ ಕೋರ್ಟ್ ಸರ್ಕಲ್, ಬಸ್ ನಿಲ್ದಾಣ, ತಾಲೂಕು ಕಚೇರಿ, ಶಿವಪ್ಪನಾಯ್ಕ ರಸ್ತೆಯ ಮೂಲಕ ಸಾಗಿ ಮೃತನ ಸ್ವಗ್ರಾಮ ಗೋರನಗದ್ದೆ ತಲುಪಿದಾಗ ಮಧ್ಯಾಹ್ನ ಸುಮಾರು ಗಂಟೆ ಒಂದಾಗಿತ್ತು.

ಶನಿವಾರ ರಾತ್ರಿಯೇ ಸ್ಥಳಕ್ಕೆ ಬೆಳಗಾವಿ ವಾಯುಪಡೆ ಸೈನಿಕರ ತುಕ್ಕಡಿಯೊಂದು ಆಗಮಿಸಿ ಗ್ರಾಮದಲ್ಲಿ ಬೀಡುಬಿಟ್ಟು ಮೃತನ ಅಂತ್ಯ ಸಂಸ್ಕಾರ ಕಾರ್ಯಕ್ಕೆ ನೆರವು ನೀಡಿತ್ತು. ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ಸಿಪಿಐ ಗುರಣ್ಣ ಎಸ್ ಹೆಬ್ಬಾರ್, ಪಿಎಸ್‌ಐ ಎಸ್.ಪಿ. ಪ್ರವೀಣ್ ಸೇರಿದಂತೆ ಹಲವು ಅಧಿಕಾರಿಗಳ ತಂಡ, ಮೃತ ಸೇನಾನಿ ಮಂಜುನಾಥರಿಗೆ ಸಕಲ ಸರ್ಕಾರಿ ಅಂತಿಮ ಗೌರವ ಸಲ್ಲಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿತ್ತು.

ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಜನರ ಸಂಖ್ಯೆ ಹೆಚ್ಚಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ದರ್ಶನಕ್ಕೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಅನುವು ಮಾಡಿಕೊಡಲಾಯ್ತು.
ಶಾಸಕ ಗೋಪಾಲಕೃಷ್ಣ ಬೇಳೂರು ಪೊಲೀಸ್ ಇಲಾಖೆಗೆ ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಲು ಸೂಚನೆ ನೀಡುತ್ತಿದ್ದಂತೆ, ಪೊಲೀಸ್ ಇಲಾಖೆ ಗಾಳಿಯಲ್ಲಿ ಮೂರು ಸುತ್ತು ಕುಶಾಲು ತೋಪು ಹಾರಿಸುವ ಮೂಲಕ ಮೃತರಿಗೆ ಗೌರವ ಸಲ್ಲಿಸಿತು. ನಂತರದಲ್ಲಿ ಬೆಳಗಾವಿ ವಾಯುಪಡೆ ಸೇನಾನಿಗಳು ಮೂರು ಸುತ್ತು ಕುಶಾಲು ತೋಪುಹಾರಿಸಿ ಗೌರವ ಸೂಚಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಾಗರ ವಿಭಾಗಾಧಿಕಾರಿ ಯತೀಶ್. ಆರ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್, ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದು ಅಗಲಿದ ಯೋಧನ ಅಂತಿಮ ದರ್ಶನ ಪಡೆದರು.

ಒಟ್ಟಾರೆ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು ಕಂಡು ಬಂತು. ಅಗಲಿದ ಯೋಧನ ದೇಹಕ್ಕೆ ಸಹೋದರ ಯುವರಾಜ್ ಅಗ್ನಿ ಸ್ಪರ್ಷ ಮಾಡಿದರು. ವಾಯು ಸೇನ ಸಿಬ್ಬಂದಿಗಳು ಮೃತ ಯೋಧನ ಕುಟುಂಬವರ್ಗಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳು ಸಂಪನ್ನಗೊಂಡವು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1A3zaiURcB/