ಇತಿಹಾಸ ಕಥೆ ರೂಪದಲ್ಲಿ ಸ್ವಾರಸ್ಯಕರವಾಗಿ ಬಂದಾಗ ಸಾಹಿತ್ಯವಾಗುತ್ತದೆ ; ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು

Written by Mahesha Hindlemane

Published on:

ಹೊಸನಗರ ; ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಂಪೆಕಟ್ಟೆಯ ಪ್ರೌಢಶಾಲೆಯಲ್ಲಿ ಸಾವಿತ್ರಮ್ಮ ಅಂಬ್ರಯ್ಯಮಠ ದತ್ತಿ ನಿಧಿ ಮತ್ತು ಶಾಮಣ್ಣ ಉಡುಪ ನಗರ ಧತ್ತಿ ನಿಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಣೇಶ ಮೂರ್ತಿ ನಾಗರಕೂಡಿಗೆ ಮಾತನಾಡಿ, ದತ್ತಿ ದಾನಿಗಳು ತಮ್ಮ ಪ್ರಿಯರ ಹೆಸರಿನಲ್ಲಿ ಇಟ್ಟ ದೇಣಿಗೆ ಹಣದಿಂದ ಬಂದ ಬಡ್ಡಿ ಹಣದಲ್ಲಿ ಸಾಹಿತ್ಯ ಪರಿಷತ್ತು ಈ ದತ್ತಿನಿಧಿ ಕಾರ್ಯಕ್ರಮ ಆಯೋಜಿಸಿದೆ. ಪ್ರತಿ ವರ್ಷವೂ ಅವರು ಹೇಳಿದ ವಿಷಯದಲ್ಲಿ ಯಾವುದಾದರೂ ಸಾಹಿತ್ಯ ಚಟುವಟಿಕೆ ನಡೆಸುವ ವ್ಯವಸ್ಥೆ ನಡೆದು ಬಂದಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮವು ಒಂದು ರೀತಿಯ ಜ್ಞಾನವನ್ನು ಎಲ್ಲರಿಗೂ ಪಸರಿಸುವಂತೆ ಮಾಡುವ ಹಾಗು ದತ್ತಿ ದಾನಿಗಳ ಹಣವನ್ನು ಸಾಹಿತ್ಯದ ಮೂಲಕ ವಿನಿಯೋಗಿಸುವ ಸದುದ್ದೇಶ ಆಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಮಾತನಾಡಿ, ಸಾಹಿತ್ಯ ಮತ್ತು ಇತಿಹಾಸಕ್ಕೆ ಇರುವ ಅವಿನಾಭಾವ ಸಂಬಂಧ ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ಮತ್ತು ಪೋಷಕರಿಗೆ, ಶಿಕ್ಷಕರಿಗೆ ವಿವರಿಸಿದರು.

ದತ್ತಿ ದಾನಿ ಅಂಬ್ರಯ್ಯ ಮಠ ಮಾತನಾಡಿ, ಇತಿಹಾಸವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ, ಅನೇಕ ಶಾಸನಗಳನ್ನು ಓದಿ, ಅಲ್ಲಿಯ ಸುತ್ತಮುತ್ತಲಿನ ಕುರುಹುಗಳನ್ನು ಹುಡುಕಿ, ಸಾಕಷ್ಟು ಪರಿಶ್ರಮದ ನಂತರ ಇತಿಹಾಸಕ್ಕೆ ಒಂದು ಆಯಾಮ ಕೊಟ್ಟು ಬರೆಯುವುದು ಕಾದಂಬರಿಯಾಗಿ ಕಂಡರೂ ಅದರಲ್ಲಿ ಸತ್ಯವಿರುತ್ತದೆ ಮತ್ತು ಸಾಹಿತ್ಯದ ಜೊತೆಗೆ ಇತಿಹಾಸವು ಅಡಕವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು ಒಂದು ಒಳ್ಳೆಯ ಕಾರ್ಯಕ್ರಮ ನೀಡಿದ್ದಕ್ಕೆ  ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಲ್ಲದೆ, ಮುಂದೆಯೂ ನಮ್ಮ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದಾದರೂ ತಮ್ಮ ಸಹಕಾರವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕ್ಷಮಾ ಟಿ.ಜಿ ಉಪಸ್ಥಿತರಿದ್ದರು. ಕಾರ್ತಿಕ್ ಸ್ವಾಗತಿಸಿ, ನೀತಾ ಜಿ ನಿರೂಪಿಸಿ, ಅಶ್ವಿನಿ ಪಂಡಿತ್ ವಂದಿಸಿದರು. ದತ್ತಿನಿಧಿ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಪೋಷಕರು, ಶಾಲಾ  ಮಕ್ಕಳು ಉಪಸ್ಥಿತರಿದ್ದರು.

Leave a Comment