Ripponpete

ಮೊರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಹೊಂಬುಜ ಶ್ರೀ ಆಶೀರ್ವಚನ

ರಿಪ್ಪನ್‌ಪೇಟೆ : ಹುಂಚ ಕ್ಷೇತ್ರದ ಪರಮ ಪೂಜ್ಯ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿಶೇಷ ಆಶೀರ್ವಚನ ನೀಡಿದರು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮಕ್ಕಳಿಗೆ ಉತ್ತಮ ಶಿಕ್ಷಣದ ಮಹತ್ವವನ್ನು ವಿವರಿಸಿ, ಅವರ ಭವಿಷ್ಯ ಬೆಳವಣಿಗೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಹಾರೈಸಿದರು.

“ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದರೂ, ಮೊರಾರ್ಜಿ ಶಾಲೆಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತಿವೆ. ಇಂತಹ ಶಾಲೆಗಳಲ್ಲಿ ನಿಮ್ಮ ಮುಂದಿನ ಜೀವನದಲ್ಲಿ ಉನ್ನತ ಸ್ಥಾನಗಳ ಸಾಧನೆ ಮಾಡಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶ್ರೀಗಳು ಅಭಿವ್ಯಕ್ತಿಸಿದರು.

ಶಿಬಿರದ ಸಂಸ್ಥಾಪಕರಾಗಿ ಹಾಗೂ ಹಳೆ ನವೋದಯ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ ಅವರು ಈ ಶಿಬಿರದ ಯಶಸ್ಸನ್ನು ಸ್ಮರಿಸಿ, “ಕರ್ನಾಟಕದಲ್ಲಿ ಮೊದಲ ಬಾರಿ ನವೋದಯ ಮತ್ತು ಮೊರಾರ್ಜಿ ಶಾಲೆಗಳಿಗಾಗಿ ಆರಂಭಿಸಿದ ಈ ಉಚಿತ ತರಬೇತಿ ಶಿಬಿರವು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶವನ್ನು ನೀಡುತ್ತಿದೆ. ಈ ಯಶಸ್ಸಿಗೆ ಶಿಬಿರದ ಶಿಕ್ಷಕ ವೃಂದ, ಸಂಚಾಲಕರು ಮತ್ತು ಮಕ್ಕಳ ಶ್ರಮವನ್ನು ಅಭಿನಂದಿಸುತ್ತೇನೆ. ಈ ಸಾಧನೆಯನ್ನು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾದಪದ್ಮಗಳಿಗೆ ಸಮರ್ಪಿಸುತ್ತೇನೆ” ಎಂದು ಹೇಳಿದರು.

ಶಿವಮೊಗ್ಗ ಹಳೆ ನವೋದಯ ವಿದ್ಯಾರ್ಥಿಗಳ ಮಿಲನ ಅಸೋಸಿಯೇಷನ್ ಮತ್ತು ಹುಂಚ ಯುವ ಬಳಗದ ಸಹಯೋಗದಲ್ಲಿ 2021ರಲ್ಲಿ ಪ್ರಾರಂಭವಾದ ಈ ಶಿಬಿರವು ಪ್ರತಿ ವರ್ಷ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ 24ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೀವ್ರ ತರಬೇತಿ ನೀಡುತ್ತಿದೆ. ಶಿಬಿರದ ಅವಧಿಯಲ್ಲಿ 4-5 ತಿಂಗಳು ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರಿಚಯ, ಆಯ್ಕೆ ಪ್ರಕ್ರಿಯೆ, ಕೋಚಿಂಗ್, ಮಾದರಿ ಪರೀಕ್ಷೆಗಳು, ಕಲಿಕಾ ಸಾಮಗ್ರಿಗಳು ಮತ್ತು ಸಮಯ ನಿರ್ವಹಣೆ ಸೇರಿದಂತೆ ವಿವಿಧ ತರಬೇತಿಗಳನ್ನು ಒದಗಿಸಲಾಗುತ್ತದೆ.

ಪ್ರಸ್ತುತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಈ ಶಿಬಿರದ 3 ಮಕ್ಕಳು ನವೋದಯ ವಸತಿ ಶಾಲೆಗೆ ಮತ್ತು 12 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಸೆಪ್ಟೆಂಬರ್‌ನಿಂದ ಜನವರಿ ತನಕ ಪ್ರತಿ ಭಾನುವಾರ ತರಗತಿಗಳು, ಆನ್‌ಲೈನ್ ಪರೀಕ್ಷೆಗಳು, ಪ್ರೇರಣಾತ್ಮಕ ಕಾರ್ಯಾಗಾರಗಳು ಹಾಗೂ ಕ್ವಿಜ್ ಸ್ಪರ್ಧೆಗಳು ನಡೆದಿದೆ. ಶಿವಮೊಗ್ಗ ಪಿಎಂ ಶ್ರೀ-ಜವಾಹರ್ ನವೋದಯ ವಿದ್ಯಾಲಯಕ್ಕೆ ಭೇಟಿ ಈ ಮಕ್ಕಳ ಸಾಧನೆಯನ್ನು ಇನ್ನೂ ಉತ್ತೇಜನ ನೀಡಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಿವಮೊಗ್ಗ ಜಿಲ್ಲೆಯ ಗಾಜನೂರಿನ ನವೋದಯ ಶಾಲೆಗೆ ತೇರ್ಗಡೆಯಾದ ವಿದ್ಯಾರ್ಥಿಗಳಲ್ಲಿ ಸುಧನ್ವ ಎಸ್, ಆರಾಧ್ಯ ಕೆ ಪಿ, ಮೈತ್ರಿ ಎಸ್ ಎನ್ ಮತ್ತು ಮೊರಾರ್ಜಿ ವಸತಿ ಶಾಲೆಗೆ ತೇರ್ಗಡೆಯಾದವರಲ್ಲಿ ಪ್ರಣತಿ, ಶಾನವಿ ಟಿ ಎಂ, ಅನ್ವಿತಾ ಹೆಚ್ ಎಂ, ಅರ್ನವ್ ಹೆಚ್ ಪಿ, ಧನುಷ್, ಸಖಿ ಕೆ ಕೆ, ಸೀಕ್ಷಿತ್ ಎನ್, ಅನನ್ಯ ಪಿ, ಅಪೂರ್ವ ಪಿ, ಕೀರ್ತಿ ಹೆಚ್ ಎಸ್, ಮೈತ್ರಿ, ಸುಧನ್ವ ಮೊದಲಿದ್ದಾರೆ.

ಪ್ರತಿ ವರ್ಷ 3-4 ಮಕ್ಕಳು ನವೋದಯ ಶಾಲೆಗೆ ಮತ್ತು 20ಕ್ಕೂ ಹೆಚ್ಚು ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುತ್ತಿರುವುದು ಮಲೆನಾಡಿನ ಗ್ರಾಮೀಣ ಮಕ್ಕಳಿಗೆ ಹೊಸ ಚೈತನ್ಯ ನೀಡುತ್ತಿದೆ. ಈಗಾಗಲೇ ಹುಂಚ, ಕೋಣಂದೂರು, ತ್ಯಾಗರ್ತಿ ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲಿ ಶಿಬಿರಗಳು ನಡೆಯುತ್ತಿವೆ. ಈ ವರ್ಷದ ಶಿಬಿರದಲ್ಲಿ ಒಟ್ಟು 210ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಹುಂಚದಿಂದ 12, ಶಿಕಾರಿಪುರದಿಂದ 3 ಮತ್ತು ತ್ಯಾಗರ್ತಿ ಶಿಬಿರದಿಂದ 2 ಮಕ್ಕಳು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದಾರೆ.

ಈ ಸಂಸ್ಥೆಯು ಕಳೆದ ಐದು ವರ್ಷಗಳಲ್ಲಿ 584 ಮಕ್ಕಳಿಗೆ ಉಚಿತ ತರಬೇತಿ ನೀಡಿದ್ದು, 16 ಮಕ್ಕಳು ನವೋದಯ, 2 ಮಕ್ಕಳು ಏಕಲವ್ಯ ಮತ್ತು 97 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಸುಮಾರು 3.76 ಕೋಟಿ ರೂಪಾಯಿ ಮೌಲ್ಯದ ಶೈಕ್ಷಣಿಕ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದುಕೊಂಡಿದ್ದಾರೆ ಎಂದರು.

ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಜೋಯ್ಸ್ (9980463013) ಅವರನ್ನು ಸಂಪರ್ಕಿಸಬಹುದು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]