RIPPONPETE ; ಜೀವನದಲ್ಲಿ ಪಾಪ ಪುಣ್ಯ ಕಾರ್ಯಗಳು ಹಾಸುಹೊಕ್ಕಾಗಿದ್ದರೂ ಕರ್ತವ್ಯ ಬದ್ಧತೆಯಿಂದ ಧಾರ್ಮಿಕ ಪಥವನ್ನು ತೊರೆಯಬಾರದು ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಜೈನ ಮಠದ ಪೀಠಾಧಿಕಾರಿಯಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಪಟ್ಟಾಭಿಷೇಕದ 13ನೇ ವರ್ಷದ ವರ್ಧಂತ್ಯುತ್ಸವದ ಶುಭದಿನದಂದು ಪರಂಪರಾನುಗತ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಶುಭ ಸಂದೇಶವಿತ್ತರು.
ಪೂರ್ವ ಭಟ್ಟಾರಕರ ಸಮರ್ಪಣಾಭಾವವು ಹೊಂಬುಜ ಶ್ರೀಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ವಿಸ್ತೃತ ಯೋಜನೆಗೆ ನಾಂದಿಯಾಗಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದಏವಿಯವರ ಕೃಪೆಯಿಂದ ಜಿನಾಲಯದ ನಿರ್ಮಾಣ, ಭಕ್ತರಿಗೆ ವಸತಿ ಸಮುಚ್ಛಯ, ಆಂಗ್ಲಮಾಧ್ಯಮ ಶಾಲೆ, ಶ್ರೀ ಕುಂದಕುಂದ ವಿದ್ಯಾಪೀಠದ ಗುರುಕುಲ, ಗೋಶಾಲೆ ಹಾಗೂ ಅಧೀನ ಕ್ಷೇತ್ರಗಳಾದ ಕುಂದಾದ್ರಿ, ವರಂಗ, ಹಟ್ಟಿಯಂಗಡಿಯಲ್ಲಿಯೂ ಅಭಿವೃದ್ಧಿಯಾಗುತ್ತಿದೆ ಎಂದು ಸ್ವಸ್ತಿಶ್ರೀಗಳವರು ಜೈನಾಗಮದಲ್ಲಿ ಉಲ್ಲೇಖಿಸಿದಂತೆ ಮತ್ತು ಮುನಿವರ್ಯರ, ಆರ್ಯಿಕೆಯರ ಶುಭಾಶೀರ್ವಾದಗಳೊಂದಿಗೆ ಅತಿಶಯ ಶ್ರೀಕ್ಷೇತ್ರ ಹೊಂಬುಜ ದರ್ಶನಾರ್ಥಿಗಳ ‘ಪುಣ್ಯ ಪಾವನ ಕ್ಷೇತ್ರ’ ವಾಗಿದೆ ಎಂದರು.
ಸ್ವಜ್ಞಾನದಿಂದ ಸುಜ್ಞಾನದೆಡೆಗೆ ಸಾಗೋಣ, ಜಿನಮಾರ್ಗವು ಶುಭ ಭಾವನೆಗೆ ಪ್ರೇರಣೆಯಾಗಲಿ. ಕ್ಷೇಮಂ ಸರ್ವ ಪ್ರಜಾನಾಂ ಎಂದು ಭಕ್ತವೃಂದದವರನ್ನು ಆಶೀರ್ವದಿಸಿದರು.
ಪ್ರಾತಃಕಾಲ ನಿತ್ಯಪೂಜೆಯನ್ನು ನೆರವೇರಿಸಿ, ಶ್ರೀ ಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಸನ್ನಿಧಿಯಲ್ಲಿ ಸ್ವಸ್ತಿಶ್ರೀಗಳವರು ಪೂಜೆ ಸಲ್ಲಿಸಿದರು. ಕ್ಷೇತ್ರದ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಜಿನಮಂದಿರದಲ್ಲಿ ದರ್ಶನ ಪಡೆದು ಪಟ್ಟದ ಪೀಠದಲ್ಲಿ ಆಸೀನರಾದರು.
ಸ್ವಸ್ತಿವಾಚನ, ಪಾದ ಪೂಜೆಯನ್ನು ಪದ್ಮರಾಜ ಇಂದ್ರ ಹಾಗೂ ಸಹಪುರೋಹಿತರು ನೆರವೇರಿಸಿದರು.
ಊರ ಪರವೂರ ಭಕ್ತರು, ಹುಂಚ ಜೈನ ಸಮಾಜ, ಶ್ರೀ ಪದ್ಮಾವತಿ ಮಹಿಳಾ ಮಂಡಲ, ಗುರುಕುಲದ ವಿದ್ಯಾರ್ಥಿಗಳು, ಶ್ರೀಮಠದ ಸೇವಾಕಾಂಕ್ಷಿಗಳು ಸ್ವಾಮೀಜಿಯವರಿಂದ ಶ್ರೀ ಫಲ ಮಂತ್ರಾಕ್ಷತೆ ಪಡೆದರು.