ಹೊಸನಗರ : ತಾಲೂಕಿನ ಹೂವಿನಕೋಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ನೀರಿಗೆ ವಿಷ ಹಾಕಿದ ಪ್ರಕರಣದ ತನಿಖೆ ಇದೀಗ ಮಹತ್ವದ ತಿರುವು ಪಡೆದಿದೆ.
ನಾಲ್ಕು ದಿನಗಳ ಹಿಂದೆ ಈ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಘಟನೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, “ಇದು ಭಯೋತ್ಪಾದನೆಯಿಗಿಂತಲೂ ಗಂಭೀರವಾದ ಪ್ರಕರಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಯ ನಂತರ, ಪೊಲೀಸರು ತನಿಖೆ ಚುರುಕುಗೊಳಿಸಿದ್ದರು
ಗಂಭೀರ ತನಿಖೆ:
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಮೂರು ವಿಶೇಷ ತಂಡಗಳು ರಚನೆಯಾಗಿದ್ದು, ಒಟ್ಟು 18 ಪೊಲೀಸರನ್ನೇ ಈ ತನಿಖೆಗೆ ನೇಮಿಸಲಾಗಿತ್ತು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ, ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಕೂಡ ಸಕ್ರಿಯವಾಗಿ ಸಂಗ್ರಹಿಸಿ, ಟವರ್ ಡಂಪ್ ಸೇರಿದಂತೆ ಇತರೆ ಮಾಧ್ಯಮಗಳ ಮೂಲಕ ತನಿಖೆ ಮುಂದುವರೆಸಿದ್ದರು.
ತನಿಖೆಯಿಂದ ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಈ ವಿಷ ಬೆರೆಸಿದ ಕೃತ್ಯ ಮಾಡಿರುವುದಾಗಿ ಪತ್ತೆಯಾಗಿದ್ದು, ಇದು ಎಲ್ಲರಿಗೂ ಆಘಾತ ಮೂಡಿಸಿದೆ. ಘಟನೆ ಮಕ್ಕಳ ಆಟದ ಭಾಗವಾಗಿದ್ದರೂ, ಇದರ ಪರಿಣಾಮ ತುಂಬಾ ಭಯಾನಕವಾಗಿದೆ.
ಎಲ್ಲರ ಗಮನ ಸೆಳೆಯಲು ಕೃತ್ಯ !
5ನೇ ತರಗತಿ ವಿದ್ಯಾರ್ಥಿಯೇ ಕೀಟನಾಶಕ ಬೆರೆಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಕೀಟನಾಶಕದ ವಾಸನೆ ಬಂದಿದ್ದು, ಆತನ ಕೈ ಕೂಡ ವಾಸನೆಯಿಂದ ಕೂಡಿತ್ತು.
ವಿದ್ಯಾರ್ಥಿಯನ್ನು ಕರೆದು ವಿಚಾರಣೆ ನಡೆಸಿದಾಗ ಪೋಷಕರು ಶುಂಠಿ ಬೆಳೆಯ ರೋಗಕ್ಕೆ ಹಾಕಲು ಮನೆಯಲ್ಲಿ ಇಟ್ಟಿದ್ದ ಔಷಧಿಯನ್ನು ತಂದು ನೀರಿನ ಟ್ಯಾಂಕ್‌ಗೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಎಲ್ಲರ ಗಮನ ಸೆಳೆಯಲು, ಕುತೂಹಲಕ್ಕಾಗಿ ಕೃತ್ಯವೆಸಗಿದ್ದಾಗಿ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಎರಡನೇ ತರಗತಿ ವಿದ್ಯಾರ್ಥಿ ಶೌಚಾಲಯದಲ್ಲಿ ಇಟ್ಟಿದ್ದ ಫಿನಾಯಿಲ್ ತಂದು ಶಾಲೆಯಲ್ಲಿ ಇಟ್ಟಿದ್ದ ಕುಡಿಯುವ ನೀರಿನ ಬಾಟಲಿಗೆ ಹಾಕಿದ್ದ. ಅದನ್ನು ಗಮನಿಸಿದ್ದ ಶಿಕ್ಷಕರು ಆ ನೀರು ಚೆಲ್ಲಿ, ಆ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿದ್ದರು. ಆ ನಂತರ ಎಲ್ಲರೂ 2ನೇ ತರಗತಿ ವಿದ್ಯಾರ್ಥಿ ಬಗ್ಗೆ ಮಾತನಾಡುತ್ತಿದ್ದರು. ಇದು ಟ್ಯಾಂಕ್‌ಗೆ ಕೀಟನಾಶಕ ಬೆರೆಸಲು 5ನೇ ತರಗತಿ ವಿದ್ಯಾರ್ಥಿಗೆ ಪ್ರೇರಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯವೆಸಗಿದ ಬಾಲಕ ಶಾಲೆಯ ವಿದ್ಯಾರ್ಥಿ ಪರಿಷತ್‌ನಲ್ಲಿ ‘ಮುಖ್ಯಮಂತ್ರಿ’ ಆಗಿದ್ದ. ಹೀಗಾಗಿ ನಿತ್ಯ ಶಿಕ್ಷಕರು ಹಾಗೂ ಇತರೆ ವಿದ್ಯಾರ್ಥಿಗಳಿಗಿಂತ ಮುಂಚೆ ಬಂದು ಕೊಠಡಿಗಳ ಸ್ವಚ್ಛತೆ, ಟ್ಯಾಂಕ್‌ಗಳಲ್ಲಿ ಇರುವ ನೀರಿನಮಟ್ಟ ಪರಿಶೀಲಿಸುತ್ತಿದ್ದ. ಅದೇ ರೀತಿ ಜುಲೈ 31ರಂದು ಮೊದಲೇ ಶಾಲೆಗೆ ಬಂದಿದ್ದು, ಟ್ಯಾಂಕ್‌ನಲ್ಲಿ ಕೀಟನಾಶಕ ಬೆರೆಸಿದ್ದ ಎಂದು ಮೂಲಗಳು ಹೇಳಿವೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.