HOSANAGARA ; ಏನ್ ಮಾಡೋದು ಹೇಳಿ, ಕೆಲವು ಬಾರಿ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆ ಸರ್ಕಾರಿ ಇಲಾಖಾ ಸಿಬ್ಬಂದಿಗಳಿಗೆ ಎದುರಾಗುವುದು ಅಲ್ಲಲ್ಲಿ ಕಂಡು ಕೇಳಿದ್ದೇವೆ. ಇದರಿಂದ ಹೊಸನಗರ ತಾಲೂಕಿನ ಕೆಲವು ಸರ್ಕಾರಿ ಇಲಾಖೆಗಳೇನೂ ಹೊರತಾಗಿಲ್ಲ. ಅದರಲ್ಲೂ ‘ಹಲ್ಲಿದ್ದಾಗ ಕಡ್ಲೆ ಇರಲ್ಲ, ಕಡ್ಲೆ ಇದ್ದಾಗ ಹಲ್ಲೇ ಇರೋದಿಲ್ಲ’ ಎಂಬ ಗಾದೆ ಮಾತಿನಂತಾಗಿದೆ ಇಲ್ಲಿನ ಶಿಕ್ಷಣ ಇಲಾಖೆಯ ಸ್ಥಿತಿ-ಗತಿ.
ಸುಮಾರು 100 ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಶಾಲವಾಗಿ ಹರಡಿರುವ ಹೊಸನಗರ ತಾಲೂಕು, ಹಲವು ಜಲವಿದ್ಯುತ್ ಯೋಜನೆಗಳ ಅನುಷ್ಠಾನದಿಂದ ಹೆಚ್ಚಿನ ಭೂ ಭಾಗವನ್ನು ಅಪೋಶನ ಪಡೆದಿದೆ. ಮೊದಲೇ ಮಲೆನಾಡು ಪ್ರದೇಶ ಆಗಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಮಳೆ ಬಿದ್ದ ಪ್ರದೇಶ ಎಂದು ದಾಖಲಾದ ಖ್ಯಾತಿ ಸಹ ಇದೇ ತಾಲೂಕಿಗೆ ಸಲ್ಲುತ್ತಿದೆ.
ತಾಲೂಕಿನ ಹೆಚ್ಚಿನ ಭೂ ಪ್ರದೇಶವು ಬೆಟ್ಟ-ಗುಡ್ಡ, ಹಳ್ಳ-ಕೊಳ್ಳಗಳಿಂದ ಆವೃತ್ತವಾಗಿದೆ. ಕೆಲವು ಗ್ರಾಮಗಳಿಗೆ ಕಡಿದಾದ ರಸ್ತೆಗಳ ಸಂಪರ್ಕವಿದ್ದು ಜನಸಂದಣಿ ಸಹ ವಿರಳವಾಗಿದೆ. ತಾಲೂಕಿನ 31 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 276 ಪ್ರಾಥಮಿಕ ಹಾಗು ಮಾಧ್ಯಮಿಕ ಸರ್ಕಾರಿ ಶಾಲೆಗಳಿವೆ. ಸರ್ಕಾರ ಅನುಷ್ಠಾನಗೊಳಿಸಿದ ಬಿಸಿಯೂಟ, ಸಮವಸ್ತ್ರ, ಶೂ ಭಾಗ್ಯ, ಇತ್ತೀಚಿನ ಉಚಿತ ಮೊಟ್ಟೆ, ಚಿಕ್ಕಿ ಸೇರಿದಂತೆ ಹಲವು ಯೋಜನೆಗಳ ಸಮರ್ಪಕ ಜಾರಿ ಕುರಿತಾದ ಮೇಲ್ವಿಚಾರಣೆ, ತನಿಖೆ, ಸಮಗ್ರ ಮಾಹಿತಿ ಸಂಗ್ರಹ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಕ್ಷಕರ ಕರ್ತವ್ಯ ಪಾಲನೆ ಕುರಿತಾಗಿ ಬಿಇಒ ಸೇರಿದಂತೆ ಶಿಕ್ಷಣ ಇಲಾಖಾ ಸಿಬ್ಬಂದಿಗಳು ಆಗಾಗ್ಗೆ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುವುದು, ಸ್ಥಳ ಪರಿಶೀಲನೆ ಮಾಡಿ, ಇಲಾಖೆ-ಸರ್ಕಾರಕ್ಕೆ ವರದಿ ಸಲ್ಲಿಸುವುದು ಮೇಲಾಧಿಕಾರಿಗಳ ಕರ್ತವ್ಯ ಆಗಿದೆ. ಆದರೆ, ಕಳೆದ 5 ವರ್ಷಗಳಿಂದ ಈ ಎಲ್ಲಾ ಕಾರ್ಯಗಳ ನಿರ್ವಹಣೆಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಸರ್ಕಾರಿ ವಾಹನ ಸೌಕರ್ಯ ಲಭ್ಯವಿಲ್ಲ ಎಂಬುದೇ ವಿಪರ‍್ಯಾಸದ ಸಂಗತಿ !.
ಈ ಹಿಂದೆ ಇಲಾಖೆಗೆ ನೀಡಿದ್ದ ಜೀಪ್ ತನ್ನ ಜೀವಿತಾವಧಿ ಪೂರೈಸಿದ ಹಿನ್ನೆಲೆಯಲ್ಲಿ ಕಛೇರಿಯ ಗೋದಾಮು ಸೇರಿ ಸರಿ ಸುಮಾರು 5 ವರ್ಷಗಳೇ ಸಂದಿವೆ. ಆ ಬಳಿಕ ಇಲಾಖೆಯಲ್ಲಿ ಮೂರು ಶಿಕ್ಷಣಾಧಿಕಾರಿಗಳ ಬದಲಾವಣೆ ಆಗಿದೆ. ಸಾಗರ ವಿಧಾನಸಭಾ ಕ್ಷೇತ್ರದ ಹಿಂದಿನ ಶಾಸಕ ಹರತಾಳು ಹಾಲಪ್ಪ ಅವರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಇಲಾಖೆಗೆ ವಾಹನ ಸೌಕರ್ಯ ಕಲ್ಪಿಸಲು ಅದೇಕೋ ಮನಸ್ಸು ಮಾಡಲೇ ಇಲ್ಲ. ಕಳೆದ 2 ವರ್ಷಗಳಿಂದ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಆರ್. ಕೃಷ್ಣಮೂರ್ತಿ ಅವರು, ಇಲಾಖೆಯ ಎಲ್ಲಾ ಕಾರ್ಯವೈಖರಿಯನ್ನು ಸಮರ್ಪಕವಾಗಿ ಸರಿ ವೇಳೆಯಲ್ಲಿ ನಿರ್ವಹಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ಸೃಷ್ಠಿಸಲು ಶಕ್ತಿ ಮೀರಿ ಶ್ರಮಿಸುತ್ತಿರುವ ವಿಷಯ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ. ಆ ಕಾರಣಕ್ಕೆ ಹಲವು ಶಾಲಾಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗಿದೆ ಎಂಬುದು ಇಲಾಖೆ ಸಿಬ್ಬಂದಿಗಳ ಹರ್ಷಕ್ಕೆ ಕಾರಣವೂ ಆಗಿದೆ.
ಶಿಕ್ಷಣ ಇಲಾಖೆಯು ಹೊರಗುತ್ತಿಗೆ ಆಧಾರದ ಮೇಲೆ ವಾಹನ ಸೌಕರ್ಯ ಕಲ್ಪಿಸಲು ಅದೇಶ ನೀಡಿದ್ದರೂ, ಸಣ್ಣ-ಪುಟ್ಟ ಕಾರ್‌ನಂತಹ ವಾಹನ ಬಾಡಿಗೆ ಪಡೆಯಲು ಇದು ಸಾಧ್ಯವಾಗುತ್ತದೆ. ಆದರೆ, ಇಲ್ಲಿನ ವಿಪರೀತ ಮಳೆ, ಬೆಟ್ಟ-ಗುಡ್ಡಗಳ ಮೇಲಿನ ಪ್ರಯಾಣಕ್ಕೆ ಸುಸಜ್ಜಿತ ಜೀಪಿನ ವ್ಯವಸ್ಥೆಯ ಅಗತ್ಯ ಕಂಡು ಬಂದಿರುವ ಕಾರಣ ತೀರ್ಥಹಳ್ಳಿ, ಹೊಸನಗರ, ಸಾಗರದಂತ ತಾಲೂಕುಗಳಲ್ಲಿ ಶಿಕ್ಷಣ ಇಲಾಖೆಗೆ ಜೀಪ್ ಸೌಕರ್ಯ ಕಲ್ಪಿಸಿದ್ದಲ್ಲಿ ಮಾತ್ರವೇ ಓಡಾಟಕ್ಕ ಸೂಕ್ತ ಎನ್ನುವಂತಾಗಿದೆ. ಮೊದಲೇ ಮುಳುಗಡೆ ಸಂತ್ರಸ್ಥರ ನಾಡು ಎಂದೇ ಬಿಂಬಿತಗೊಂಡಿರುವ ಹೊಸನಗರ ತಾಲೂಕಿನ ಶಿಕ್ಷಣ ಇಲಾಖೆಗೆ ಗಟ್ಟಿಮುಟ್ಟಾದ ಸುಸಜ್ಜಿತ ವಾಹನದ ಅವಶ್ಯಕತೆ ಇದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉಸ್ತುವಾರಿ ಜಿಲ್ಲೆಯಲ್ಲೇ ತೀರ್ಥಹಳ್ಳಿ ಹಾಗೂ ಹೊಸನಗರ ಶಿಕ್ಷಣ ಇಲಾಖೆಗೆ ಜೀಪ್ ಸೌಕರ್ಯ ಇಲ್ಲದಿರುವುದು ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವಂತಿದೆ.
ಕೆಲವೇ ದಿನಗಳ ಹಿಂದಷ್ಟೇ ಕಾರ್ಗಲ್ ಪೊಲೀಸ್ ಠಾಣೆಗೆ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಹೊಸ ಜೀಪನ್ನು ಕೊಡುಗೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಕೂಡಲೇ ಈ ಬಗ್ಗೆ ಸೂಕ್ತ ಅನುದಾನ ನೀಡುವ ಮೂಲಕ ಶಿಕ್ಷಣ ಇಲಾಖೆಯ ಈ ಜಟಿಲ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಿದೆ.
ವರದಿ : ಶ್ರೀಕಂಠ ಹೆಚ್.ಆರ್, ಹೊಸನಗರ