ಹೊಸನಗರ: ಜಲಜೀವನ್ ಮಿಷನ್ ಯೋಜನೆಯಡಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸಮಟಗಾರು ಮತ್ತು ಕಡಸೂರು ಗ್ರಾಮಗಳ ನಾಗರಿಕರ ದೂರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತ್ವರಿತವಾಗಿ ಸ್ಪಂದಿಸಿದ್ದಾರೆ. ದೂರು ಬಂದ 24 ಗಂಟೆಯೊಳಗೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಯೋಜನೆಗೆ ಮರುಚಾಲನೆ ದೊರೆತಿದೆ.
ಹೊಸನಗರ ತಾಲೂಕಿನ ಹೊನ್ನೇಬೈಲು ಗ್ರಾಮದ ಸಮಟಗಾರು ಮತ್ತು ಕಡಸೂರು ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು ನಾಲ್ಕು ವರ್ಷಗಳ ಹಿಂದೆ ಪೈಪ್‌ಲೈನ್ ಅಳವಡಿಸಿ ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕವೂ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗದೆ ಸಮಸ್ಯೆ ಮುಂದುವರಿದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಹೋರಾಟಗಾರ ವೆಂಕಟೇಶ್ ಅವರು ಸಚಿವ ಈಶ್ವರ ಖಂಡ್ರೆ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಶಿವಮೊಗ್ಗ ಜಲಜೀವನ್ ಮಿಷನ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಚಿವರ ಸೂಚನೆಯ ಬೆನ್ನಲ್ಲೇ ಹೊಸನಗರ ತಾಲೂಕು ಪಂಚಾಯತ್ ಅಧಿಕಾರಿಗಳು, ಹುಂಚ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೊಳವೆಬಾವಿ ಸ್ಥಳ ಗುರುತಿಸಲು ಭೂವಿಜ್ಞಾನಿಗಳ ತಂಡ ಸೆಪ್ಟೆಂಬರ್ 12ರಂದು ಸಮಟಗಾರು ಮತ್ತು ಕಡಸೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿಯನ್ನು ಮತ್ತೆ ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಅವರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯ ಕುರಿತು ವಿವರವಾಗಿ ಮಾಹಿತಿ ನೀಡಿ, ಕಾಮಗಾರಿ ವಿಳಂಬವಾಗದಂತೆ ಆದಷ್ಟು ಬೇಗ ಮನೆಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿದರು.

