HOSANAGARA ; ಇಲ್ಲಿನ ಮೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ಮೊರಾರ್ಜಿ ಶಾಲೆಯ ಶೌಚಾಲಯದ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿದ್ದು ಇಲ್ಲಿ ವಾಸಿಸುವ ಜನರಿಗೆ ದುರ್ವಾಸನೆ ಬರುತ್ತಿದ್ದು ರಸ್ತೆಯಲ್ಲಿ ಓಡಾಟ ನಡೆಸುವವರಿಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಹರೀಶರವರ ನೇತೃತ್ವದಲ್ಲಿ ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್‌ರಿಗೆ ಹಾಗೂ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಹಾಗೂ ಪಿಡಿಓ ರವಿಯವರಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ಮೊರಾರ್ಜಿ ಶಾಲೆಯ ಶೌಚಾಲಯದ ನೀರನ್ನು ಬಂದ್ ಮಾಡುವಂತೆ ಮನವಿ ಮಾಡಿದರು.
ಮನವಿ ಪತ್ರ ಸಲ್ಲಿಸಿ ಮಾತಾನಾಡಿದ ಹರೀಶ್, ಈಗಾಗಲೇ ನೂರಾರು ಬಾರಿ ಮೌಖಿಕವಾಗಿ ಹಾಗೂ ಅರ್ಜಿಯ ಮೂಲಕ ಸಂಬಂಧಪಟ್ಟವರಿಗೆ ತಿಳಿಸಲಾಗಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಈ ಶೌಚಾಲಯದ ನೀರು ಚರಂಡಿಯಲ್ಲಿ ನಿಲ್ಲುವುದರಿಂದ ವಾಸನೆ ಬರುತ್ತಿದೆ. ಇದರಿಂದ ಅಕ್ಕ-ಪಕ್ಕದ ಜನರಿಗೆ ಮತ್ತು ರಸ್ತೆಯಲ್ಲಿ ಓಡಾಟ ಮಾಡುವ ಸಾರ್ವಜನಿಕರಿಗೆ ಪಕ್ಕದಲ್ಲಿಯೇ ಶಾಲೆಯಿರುವುದರಿಂದ ಶಾಲೆಯ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೊಳಕು ವಾಸನೆಯಿಂದ ಮತ್ತು ಚರಂಡಿಯಲ್ಲಿ ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಶೌಚಾಲಯದ ನೀರು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳಾದ ಲಾರೆನ್ಸ್, ವಿನಾಯಕ, ಶ್ರೀಧರ, ಪ್ರಭಾಕರ, ಪ್ರಕಾಶ, ಪ್ರವೀಣ್ ರಾಮು, ಗುಂಡ, ಪ್ರವೀಣ, ವಸಂತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.