HOSANAGARA ; ಇಲ್ಲಿನ ಪಟ್ಟಣ ಪಂಚಾಯತಿಯ 2025-26ನೇ ಸಾಲಿನ ಆಯ-ವ್ಯಯ ಕುರಿತು ಪೂರ್ವಭಾವಿ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಸಾರ್ವಜನಿಕರ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸದಸ್ಯ ನೋರಾ ಮೆಟೆಲ್ಡಾ ಸಿಕ್ವೇರಾ ಮಾತನಾಡಿ, ಮುಂಬರುವ ಆಯ-ವ್ಯಯದಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿರ್ದಿಷ್ಟ ಅನುದಾನ ಮೀಸಲಿಡುವಂತೆ ಸಭೆಯ ಗಮನ ಸೆಳೆದರು.
ಸದಸ್ಯ ಅಶ್ವಿನಿ ಕುಮಾರ್ ಮಾತನಾಡಿ, ಈ ಬಾರಿಯ ಆಯ-ವ್ಯಯದಲ್ಲಿ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಆದ್ಯತೆ ಮೇರೆಗೆ ಸುಣ್ಣ-ಬಣ್ಣ ಮಾಡಲು ಕನಿಷ್ಠ ರೂ. 50 ಸಾವಿರ ಮೀಸಲಿಡಲು ಸಭೆಯನ್ನು ಕೋರಿದರು.
ಸಿಬ್ಬಂದಿ ಆಸ್ಮಾ ಪ್ರಸಕ್ತ ಸಾಲಿನ ನಿರೀಕ್ಷಿತ ಹಾಗು ವಾಸ್ತವ ಆದಾಯವನ್ನು ಸಭೆಗೆ ತಿಳಿಸಿದರು. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಸದಸ್ಯರಾದ ಸಿಂಥಿಯಾ ಶೆರಾವ್, ಗಾಯತ್ರಿ ನಾಗರಾಜ್, ಗುರುರಾಜ್, ಸುರೇಂದ್ರ ಕೋಟ್ಯಾನ್, ಆಶ್ರಯ ಸಮಿತಿ ಸದಸ್ಯೆ ರಾಧಿಕಾ ಶ್ರೇಷ್ಠಿ, ಮುಖ್ಯಾಧಿಕಾರಿ ಸುರೇಶ್, ಸಿಬ್ಬಂದಿಗಳಾದ ನೇತ್ರ ರಾಜ್, ಶೃತಿ, ಪಲ್ಲವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.