HOSANAGARA ; ಕಳೆದ 2024ರ ಮಾರ್ಚ್ ಅಂತ್ಯಕ್ಕೆ 98,45, 769 ರೂ. ನಿವ್ವಳ ಲಾಭ ಗಳಿಸಿದ್ದು ತನ್ನ ಷೇರುದಾರರಿಗೆ ಶೇ. 9 ರಷ್ಟು ಲಾಭಾಂಶ ನೀಡಿದೆ ಎಂದು ಇಲ್ಲಿನ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಜಯರಾಮ್ ತಿಳಿಸಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ 79ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಸ್ತಿ ಸಾಲ ವಸೂಲಿಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿ ಕಂಡಿದೆ. ಬಾಕಿ ಉಳಿಸಿಕೊಂಡ ಸಾಲಗಾರರಿಗೆ ಕೋರ್ಟ್ ಮೂಲಕ ಸಿವಿಲ್ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಸುಸ್ತಿ ಸಾಲ ವಸೂಲಾತಿಯು ಶೇ. 45 ರಷ್ಟಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ವಸೂಲಾತಿಯಲ್ಲಿ ಪ್ರಗತಿ ಕಂಡಿದ್ದು ಶೇ. 80ಕ್ಕೆ ಏರಿದೆ ಎಂದರು.
ಷೇರುದಾರ ಮಾಜಿ ಪೊಲೀಸ್ ಮಂಜುನಾಥ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ರೈತಾಪಿ ವರ್ಗ ಕಂಗಾಲಾಗಿದೆ. ಅಪಾರ ಬೆಳೆಯು ಕೊಳೆ ಹಾಗು ಮಳೆಯಿಂದ ನಷ್ಟವಾಗಿದೆ. ಕೇವಲ ಕೊಳೆ, ಅತಿವೃಷ್ಟಿ ಸಂತ್ರಸ್ತರಿಗೆ ಬಡ್ಡಿ ಮನ್ನಾ ಮಾಡುವ ಯೋಜನೆಯನ್ನು ಸರ್ಕಾರ ಎಲ್ಲಾ ವರ್ಗದ ಕೃಷಿಕರಿಗೆ ವಿಸ್ತರಿಸಬೇಕು ಎಂದು ಸಭೆಯನ್ನು ಆಗ್ರಹಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ ಮಾತನಾಡಿ, ಕೇಂದ್ರ ಸರ್ಕಾರ ರೈತಾಪಿ ವರ್ಗವನ್ನು ಸಹ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿದೆ. ಇದು ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಶೇ.18 ಜಿಎಸ್ಟಿ ನಿಗದಿ ಪಡಿಸುವ ಬದಲು, ರೈತರ ಕೃಷಿ ಕಾರ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕ್ಕೆ 80:20, ಕೂಲಿ : ಸಾಮಾಗ್ರಿಗಳ ಅನುಪಾತ ಅನುಸರಿಸಿ ಜಿಎಸ್ಟಿ ನಿಗದಿ ಪಡಿಸಲು ಕೇಂದ್ರ ಸರ್ಕಾರದ ಮೇಲೆ ಸಭಾ ನಡಾವಳಿ ಮೂಲಕ ಒತ್ತಡ ತರಲು ಒತ್ತಾಯಿಸಿದರು. ಇದಕ್ಕೆ ಕಳೂರು ಸಹಕಾರಿ ಸಂಘದ ಅಧ್ಯಕ್ಷ ಗುಬ್ಬಿಗ ಅನಂತರಾವ್ ಧ್ವನಿಗೂಡಿಸಿದರು.
ಸರ್ಕಾರ ಒಟ್ಟಾರೆ ಈವರೆಗೆ ರಾಜ್ಯದ ಸಹಕಾರಿ ಸಂಸ್ಥೆಗಳಿಗೆ 450 ಕೋಟಿ ರೂ. ಶೂನ್ಯ ಬಡ್ಡಿ ಸಾಲದ ಮೇಲಿನ ಬಡ್ಡಿ ನೀಡಬೇಕಿದೆ. ಅದರಲ್ಲೂ ಪಿಕಾರ್ಡ್ ಬ್ಯಾಂಕಿಗೆ 3.5 ಕೋಟಿ ರೂ. ಬಡ್ಡಿ ಹಣ ನೀಡಬೇಕಿದೆ ಎಂದರು. ಅನುದಾನ ಬಿಡುಗಡೆ ಆದಲ್ಲಿ ಹಲವು ಹೊಸ ಯೋಜನೆಯನ್ನು ಜಾರಿಗೊಳಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಗುರುಮೂರ್ತಿ, ನಿರ್ದೇಶಕರಾದ ಕೆ.ಟಿ. ನಾಗೇಶ್, ಪಿ.ಸಿ.ಮಹೇಂದ್ರ, ವೇದಾಂತಪ್ಪ, ದೇವೇಂದ್ರಪ್ಪ, ಹೇಮಾವತಿ, ಹೂವಮ್ಮ, ನರೇಂದ್ರ, ನಾಗೇಶ್, ಸತೀಶ್, ಈಶ್ವರಪ್ಪ, ನಾಮ ನಿರ್ದೇಶಕ ನಾಗೇಂದ್ರ ಉಪಸ್ಥಿತರಿದ್ದರು.
ಸಿಇಒ ಅರವಿಂದ್ ವರದಿ ವಾಚಿಸಿದರು. ರುಕ್ಮಣಿ ಸ್ವಾಗತಿಸಿ, ನಾಗೇಶ್ ವಂದಿಸಿದರು