HOSANAGARA ; ಕನ್ನಡ ಭಾಷೆ, ಸಾಹಿತ್ಯ, ಕನ್ನಡತನ ಉಳಿಸಿ ಬೆಳೆಸುವ ಕಾರ್ಯ ಕನ್ನಡನಾಡಿನ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ ಆಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಬಟ್ಟೆಮಲ್ಲಪ್ಪ ರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಕು|| ಅನಿತಾ ತಿಳಿಸಿದರು.
ಪಟ್ಟಣದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಸಿಡೆನ್ಯಿಯಲ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹೆಸರು ತಾಲೂಕು 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಬಾಲ್ಯದಿಂದಲೇ ಕನ್ನಡ ಭಾಷಾಭಿಮಾನ, ಕರುನಾಡ ಸಂಸ್ಕೃತಿ, ಕನ್ನಡ ತನ ಕುರಿತು ಅರಿವು ಮೂಡಿಸಲು ಸಾಹಿತ್ಯ ಸಮ್ಮೇಳನದ ಆಯೋಜನೆ ಸಹಕಾರಿಯಾಗಲಿದೆ ಎಂದ ಕು|| ಅನಿತಾ, ಕನ್ನಡ ಭಾಷೆಯು ತನ್ನದೇ ಆದ ಭೌವ್ಯ ಇತಿಹಾಸ ಹೊಂದಿದೆ. ಇಂತಹ ನಾಡಿನಲ್ಲಿ ಜನ್ಮತಾಳಿ, ಕಾವೇರಿ ತಾಯಿಯ ನೀರು ಕುಡಿದ ನಾವೆಲ್ಲ ನಿಜಕ್ಕೂ ಧನ್ಯರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಪ್ರಸಕ್ತ ವಿಶ್ವದಲ್ಲಿನ 8 ಸಾವಿರ ಭಾಷೆಗಳಲ್ಲಿ ಕೇವಲ 20 ಭಾಷೆಗಳು ಪದಗುಚ್ಛ ಹೊಂದಿದ್ದು, ಅವುಗಳಲ್ಲಿ ಕನ್ನಡ ಭಾಷೆಯೂ ಸಹ ಒಂದು ಎಂಬುದೇ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಆತ್ಮವಿಶ್ವಾಸ ರೂಡಿಸಿಕೊಂಡರೆ, ಸಾಹಿತ್ಯ ಕ್ಷೇತ್ರದಲ್ಲಿ ಕತೆ, ಕವನ, ಸ್ವ-ರಚಿಸಲು ಪ್ರೇರಣೆ ಆಗಲಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿನಿ ಕು|| ಹೆಚ್.ಎಂ. ನಿತ್ಯಶ್ರೀ ಸಮ್ಮೇಳನ ಉದ್ಘಾಟಿಸಿದರು. ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಬಿಇಒ ಕೃಷ್ಣಮೂರ್ತಿ ಸ್ವ-ರಚಿತ ಕವನ ವಾಚಿಸುವ ಮೂಲಕ ಕನ್ನಡಾಭಿಮಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಕಸಾಪ ನಿಕಪಪೂರ್ವ ಅಧ್ಯಕ್ಷ ತ.ಮ. ನರಸಿಂಹ, ಚೈತನ್ಯ ಪ್ರಶಸ್ತಿ ಪುರಸ್ಕೃತ ಡಾ. ಸೀಮಾ ಸೆರಾವೊ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ. ಸದಾಶಿವ, ಕಾರ್ಯದರ್ಶಿ ಸಂಕೂರು ಪಿ.ಶಾಂತಮೂರ್ತಿ, ನಿರ್ದೇಶಕ ನಾಗೇಶ್ ಉಪಸ್ಥಿತರಿದ್ದರು.
ಕತೆ, ಕವನ, ಪ್ರಬಂಧ ರಚಿಸಿ ವಾಚಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕು|| ಅಭಿಶ್ರೀ ಸ್ವಾಗತಿಸಿ, ಕು|| ಅಪೂರ್ವ ಹಾಗು ಕು|| ಮಾನ್ಯ ನಿರೂಪಿಸಿದರು. ಕು|| ದರ್ಶಿನಿ ವಂದಿಸಿದರು.