Hosanagara

ಹೊಸನಗರ ವೀರಶೈವ ಪತ್ತಿನ ಸಹಕಾರಿ ಸಂಘದಲ್ಲಿ ಭಾರಿ ಅವ್ಯವಹಾರ ಶಂಕೆ ; ಸೂಕ್ತ ತನಿಖೆಗೆ ಈಶ್ವರಪ್ಪ ಗೌಡ ಆಗ್ರಹ

ಹೊಸನಗರ ; ಪಟ್ಟಣದ ಶ್ರೀ ವೀರಶೈವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್. ಪಿ. ನಂಜುಂಡಪ್ಪ ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಸೇರಿ ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ. ಸದಸ್ಯರ ಷೇರು ಹಣ, ಠೇವಣಿ ಹಣ, ಸಾಲ ಯೋಜನೆಯಲ್ಲಿ ವಂಚನೆ ನಡೆಸಿದ್ದು ನಕಲಿ ಖಾತೆ ಸೃಷ್ಟಿ, ಅಕ್ರಮ ಹಣ ವರ್ಗಾವಣೆ, ಸಂಘದ ಹಣ ದುರ್ಬಳಕೆ ಮಾಡಿ ಬಹುಕೋಟಿ ಹಣ ಲೂಟಿ ಮಾಡಲಾಗಿದೆ. ಈ ಬಹುಕೋಟಿ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಸಂಘದ ಅಧ್ಯಕ್ಷ ವರಕೋಡು ಈಶ್ವರಪ್ಪ ಗೌಡ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಶ್ರೀ ವೀರಶೈವ ಪತ್ತಿನ ಸಹಕಾರ ಸಂಘದಲ್ಲಿ ಹೆಚ್. ಪಿ ನಂಜುಂಡಪ್ಪ ಹದಿನೆಂಟು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಈ ವೇಳೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಗೀತಾ ಗಿರೀಶ್ ಸೇರಿ ಸಂಘದಲ್ಲಿ ಹಲವಷ್ಟು ಅವ್ಯವಹಾರ ನಡೆಸಿದ್ದಾರೆ. ಸಂಘಕ್ಕೆ ಬರುತ್ತಿದ್ದ ಪಿಗ್ಮಿ ಹಣ, ಜಾಮೀನು ಸಾಲದಲ್ಲಿ ವಂಚನೆ, ಶಿವವಿಕಾಸ ಪತ್ರದಲ್ಲಿ ವಂಚನೆ, ಖಾಯಂ ಠೇವಣಿಯಲ್ಲಿ ನಕಲಿ ಬಾಂಡ್ ವಿತರಣೆ ಹಾಗೂ ರಶೀದಿ ಪುಸ್ತಕದಲ್ಲಿ ವಂಚನೆ, ಸಂಘದ ಹಣ ಬಳಕೆ ಮಾಡಿ ಮೀಟರ್ ಬಡ್ಡಿ ವ್ಯವಹಾರ ನಡೆಸಿ ಸಂಘದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈವರೆಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರ ಸಂಘದಲ್ಲಿ ನಡೆದಿದ್ದರೂ ಸಹ ಸಂಘ ನಷ್ಟದಲ್ಲಿದೆ. ಸಂಘದ ಆದಾಯದಲ್ಲಿ ನಷ್ಟವನ್ನು ತೋರಿಸಿ ಭಾರಿ ಪ್ರಮಣದ ಹಗರಣ ಮಾಡಲಾಗಿದೆ ಎಂದು ತಿಳಿಸಿದರು.

ಸಂಘದ ವ್ಯವಹಾರಗಳ ಬಗ್ಗೆ ಷೇರುದಾರರಿಂದ ದೂರು ಬಂದ ಸಂದರ್ಭದಲ್ಲಿ ಅಧ್ಯಕ್ಷ ನಂಜುಂಡಪ್ಪ ಅವರನ್ನು ಕೆಳಗಿಳಿಸಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಆಡಳಿತ ಮಂಡಳಿ ಸಂಘದ ಚಟುವಟಿಕೆ ಗಮನಿಸಿದಾಗ ಹಲವಷ್ಟು ಅಕ್ರಮ, ಅವ್ಯವಹಾರ ಬೆಳಕಿಗೆ ಬಂದಿದೆ. ತಕ್ಷಣ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್ ಅವರನ್ನು ಅಮಾನತು ಮಾಡಲಾಗಿದೆ. ಸಂಘದ ಆರ್ಥಿಕ ವಹಿವಾಟು ಕುರಿತು ಸಮಗ್ರ ತನಿಖೆಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ. ಸಹಕಾರಿ ಇಲಾಖೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಚ್. ಬಸಪ್ಪ ಬೆಳಂದೂರು, ಶಿವಾನಂದ ಮಾವಿನಕಟ್ಟೆ, ಎಚ್. ಮಲ್ಲಿಕ ಜಬಗೋಡು, ಯೋಗೇಶ ಕುಮಾರ್ ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>