HOSANAGARA | ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಇಂದು ಬೆಳಗ್ಗೆಯಿಂದ ಬಿಟ್ಟು ಬಿಡದೆ ಭಾರಿ ಮಳೆ (Heavy Rain) ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಇನ್ನೂ ಭಾರೀ ಮಳೆಗೆ ತಾಲೂಕಿನ ನಗರ ಹೋಬಳಿಯ ಸಮಗೋಡು ಗ್ರಾಮದ ಭೂತಪ್ಪನಗುಡಿ ಸಮೀಪ ಗುಡ್ಡ ಕುಸಿದ ಪರಿಣಾಮ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ-766c ಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಜೆಸಿಬಿ ಯಂತ್ರ ಬಳಸಿ ಮಣ್ಣು ತೆರೆಯುವ ಕಾರ್ಯ ನಡೆಸಲಾಯಿತು. ಭಾರಿ ಮಳೆ ಬೀಳುತ್ತಿರುವುದರಿಂದ ಮಣ್ಣು ತೆರವು ಕಾರ್ಯ ಮತ್ತಷ್ಟು ವಿಳಂಬಗೊಂಡಿತು.
ಈ ನಡುವೆ ಮತ್ತೆ ಗುಡ್ಡ ಕುಸಿಯುತ್ತಿದ್ದು ಈ ಭಾಗದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ತಾಲೂಕಿನ ಮಾಸ್ತಿಕಟ್ಟೆ, ಬಿದನೂರುನಗರ, ಹುಂಚ, ಕೋಡೂರು, ಹೊಸನಗರ, ನಿಟ್ಟೂರು, ಸೊನಲೆ, ಸಂಪೆಕಟ್ಟೆ, ಹುಲಿಕಲ್ ಭಾಗದಲ್ಲಿ ಬಿಟ್ಟು ಬಿಡದೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ಇನ್ನೂ ತೀರ್ಥಹಳ್ಳಿ, ಸಾಗರ ಮತ್ತು ಸೊರಬ ತಾಲ್ಲೂಕಿನಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇನ್ನೂ ಭಾರಿ ಮಳೆ ಬೀಳುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದರಿಂದ ಜನರು ಕತ್ತಲಲ್ಲೇ ಜೀವನ ಮಾಡುವಂತಾಗಿದೆ. ಮೊಬೈಲ್ ನೆಟ್‌ವರ್ಕ್ ಸಹ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.