ಶಿಕಾರಿಪುರ ; ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ಹುಚ್ಚುರಾಯಸ್ವಾಮಿ ಬ್ರಹ್ಮ ರಥೋತ್ಸವ

Written by malnadtimes.com

Published on:

ಶಿಕಾರಿಪುರ ; ರಾಜ್ಯದ ಉದ್ದಗಲಕ್ಕೂ ಅಪಾರ ಭಕ್ತ ಸಮೂಹವನ್ನು ಹೊಂದಿರುವ ತಾಲ್ಲೂಕಿನ ಜನತೆಯ ಆರಾಧ್ಯ ದೈವ ಶ್ರೀ ಹುಚ್ಚುರಾಯಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯುವುದರ ಮೂಲಕ ಇಂದು ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

WhatsApp Group Join Now
Telegram Group Join Now
Instagram Group Join Now

ಆರಂಭದಲ್ಲಿ ಶ್ರೀ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾಬಲಿ ಹಾಗೂ ವೇದಮಂತ್ರ ಘೋಷಗಳು ನಡೆಸಿದ ನಂತರ ಉತ್ಸವ ಮೂರ್ತಿಯನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಹುಚ್ಚುರಾಯಸ್ವಾಮಿಯನ್ನು ಬ್ರಹ್ಮರಥೋತ್ಸವ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕುವುದರೊಂದಿಗೆ ವಿಪ್ರ ಸಮೂಹದ ಅರ್ಚಕರಿಂದ ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಿದರು.

ಸಂಪ್ರದಾಯದಂತೆ ಗರುಡ ಪಕ್ಷಿ ದೇವಸ್ಥಾ‌ನ ಆವರಣ ಸಮೀಪ ಪ್ರದಕ್ಷಿಣೆ ಹಾಕಿದ ನಂತರ ನಾದಸ್ವರ (ಮಂಗಳವಾದ್ಯ) ಬ್ಯಾಂಡ್‌ಸೆಟ್ ವಾದ್ಯದ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ತೇರುಬೀದಿಯಲ್ಲಿರುವ ಮಾರಿಕಾಂಬಾ ಗದ್ದುಗೆವರೆಗೂ ಬ್ರಹ್ಮರಥವನ್ನು ಎಳೆದು ತಂದು ನಿಲ್ಲಿಸಿದರು. ಬ್ರಹ್ಮ ರಥ ಎಳೆಯುವ ಸಂದರ್ಭದಲ್ಲಿ ಯುವಕರು ಹರ್ಷೋದ್ದಾರರಾಗಿ ಶ್ರೀ ಹುಚ್ಚುರಾಯ ಗೋವಿಂದಾ ಗೋವಿಂದ ಆಂಜನೇಯ ಸ್ವಾಮಿ ಗೋವಿಂದಾ ಗೋವಿಂದ, ಜೈ ಶ್ರೀರಾಮ್ ಹೀಗೆ ಹಲವು ರೀತಿಯಲ್ಲಿ ಘೋಷಣೆ ಕೂಗಿದರು.

ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀ ಹುಚ್ಚುರಾಯಸ್ವಾಮಿ ದೇವರ ಮೂರ್ತಿ, ದೇವಸ್ಥಾನ ಹಾಗೂ ಬ್ರಹ್ಮರಥವನ್ನು ವಿವಿಧ ರೀತಿಯ ಹಣ್ಣು ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಿದರೆ, ಪುರಸಭೆಯಿಂದ ಶುಕ್ರವಾರ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪಾನಕ ಮಜ್ಜಿಗೆ ವಿತರಿಸಿದರು.

ಬ್ರಹ್ಮರಥೋತ್ಸವದಲ್ಲಿ ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಧಾರಾವಾಡ, ಬೆಂಗಳೂರು ಸೇರಿದಂತೆ ಜಿಲ್ಲೆಯ ಹೊಸನಗರ, ಸಾಗರ, ಸೊರಬ ಸೇರಿದಂತೆ ವಿವಿಧ ತಾಲ್ಲೂಕಿನಿಂದ ಸಾವಿರಾರು ಭಕ್ತರು ಆಗಮಿಸಿ ಹುಚ್ಚರಾಯಸ್ವಾಮಿ ದೇವರ ದರ್ಶನ ಪಡೆದು, ಬ್ರಹ್ಮ ರಥಕ್ಕೆ ಪೂಜೆ ಸಲ್ಲಿಸಿದರು.

ಬ್ರಹ್ಮರಥೋತ್ಸವ ಪ್ರಯಕ್ತ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ತಾಲ್ಲೂಕಿನ ಶಾಸಕ ಬಿ.ವೈ. ವಿಜಯೇಂದ್ರ ಕುಟುಂಬ ಸಮೇತ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಬ್ರಹ್ಮರಥೋತ್ಸವ ಎಳೆಯುವ ದೃಶ್ಯವನ್ನು ವೀಕ್ಷಿಸಿದರು.

ಶ್ರೀ ಹುಚ್ಚುರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಬೆಳಿಗ್ಗೆ 8.20ರಿಂದ 8.30ರವರೆಗಿನ ವೃಷಭ ಲಗ್ನದ ಶುಭ ಸಂದರ್ಭದಲ್ಲಿ ಚಾಲನೆ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತಾದರೂ, ಬೆಳಿಗ್ಗೆ 9-15ರ ಸುಮಾರಿಗೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನ ಅವರಣದಿಂದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ದೊರೆಯಿತು. ಇದರಿಂದಾಗಿ ವಿವಿಧ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಂತಸದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

Leave a Comment