ರಿಪ್ಪನ್ಪೇಟೆ ; ಹಣ ಗಳಿಕೆಯೊಂದೆ ಗುರಿಯಾಗದೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಾಗಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದಿಂದ ಸುಸಂಸ್ಕೃತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸಲು ಸಾಧ್ಯವೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ರೇಣುಕಪ್ಪ ಪ್ರತಿಷ್ಟಾನ ಮತ್ತು ಮಲೆನಾಡ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಮಕ್ಕಳ ಬೇಸಿಗೆ ಶಿಬಿರದ ಹಳ್ಳಿ ಮಕ್ಕಳ ರಂಗ ಹಬ್ಬ-2025 ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಗ್ರಾಮೀಣ ಪ್ರದೇಶದ ನಾಟಕ ರಂಗಕಲೆಗಳು ಬದುಕಿನಲ್ಲಿ ಬದಲಾವಣೆಯನ್ನು ತರುತ್ತವೆ. ಜಾನಪದದಲ್ಲಿ ಹಾಸುಹೊಕ್ಕಾಗಿರುವ ನಿತ್ಯ ಬದುಕಿನ ಬಗ್ಗೆ ನಾಟಕಗಳ ಮೂಲಕ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುವಂತಾಗುವುದರೊಂದಿಗೆ ಗ್ರಾಮದಲ್ಲಿ ಸಂಘರ್ಷವನ್ನು ದೂರ ಮಾಡಿ ಸಾಮರಸ್ಯ ಸಂಘಟನೆಯೊಂದಿಗೆ ಬದುಕುವುದನ್ನು ಕಲಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಡಾ.ಆರ್.ಗಣೇಶ್, ರೈತ ಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ, ಉಪನ್ಯಾಸಕ ಚನ್ನಯ್ಯ ಬಿ.ಮಾರವಳ್ಳಿ, ಶಿಕ್ಷಕಿ ರಾಜ್ಯ ಪ್ರಶಸ್ತಿ ವಿಜೇತೆ ಲಕ್ಷ್ಮಿ ಭದ್ರಾವತಿ ಇನ್ನಿತರರು ಹಾಜರಿದ್ದರು.
ನಾಗೇಂದ್ರ ಸ್ವಾಮಿಯ ಪ್ರತಿಷ್ಟಾ ವರ್ಧಂತ್ಯುತ್ಸವ ಹಾಗೂ ಶಂಕರಾಚಾರ್ಯರ ಜಯಂತಿ
ರಿಪ್ಪನ್ಪೇಟೆ ; ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿಯ ದೇವಸ್ಥಾನದಲ್ಲಿ ಮೇ 2 ರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ನಾಗೇಂದ್ರ ಸ್ವಾಮಿಯ 14ನೇ ವರ್ಷದ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಮತ್ತು ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೇರುಗಲ್ಲು ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀನಾಗೇಂದ್ರ ಸ್ವಾಮಿಯ ಪ್ರತಿಷ್ಠಾವರ್ಧಂತಿ ಉತ್ಸವ ಅಂಗವಾಗಿ ಸ್ವಾಮಿಗೆ ಮೂಲಮಂತ್ರ ಹೋಮ, ಪಂಚವಿಂಶತಿ ಕುಂಭಾಭಿಷೇಕ ವಿಶೇಷ ಪೂಜೆ ಹಾಗೂ ಸ್ವಾಮಿಯ ಮಹಾದ್ವಾರ ಕಳಸ ಪ್ರತಿಷ್ಠಾಪನೆಯೊಂದಿಗೆ ಜಗದ್ಗುರು ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮ ಜರುಗಲಿದೆ.
ವಿಶೇಷ ಪೂಜೆಯೊಂದಿಗೆ ಸ್ವಾಮಿಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರದರ್ಶನಾರ್ಶೀವಾದ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
108 ಕಲಶಾಪೂರ್ವಕ ಕುಂಬಾಭಿಷೇಕ ಕಲಾಹೋಮ
ರಿಪ್ಪನ್ಪೇಟೆ ; ಇಲ್ಲಿನ ಬರುವೆ ಗ್ರಾಮದ ಚೌಡೇಶ್ವರಿ ರಸ್ತೆಯಲ್ಲಿನ ಶ್ರೀ ಚೌಡೇಶ್ವರಿ ಆಮ್ಮನವರ ದೇವಸ್ಥಾನದಲ್ಲಿ ಮೇ 4 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಶ್ರೀ ಚೌಡೇಶ್ವರಿ ದೇವಸ್ಥಾನ ಪ್ರಥಮ ವರ್ಷದ ಪ್ರತಿಷಾ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 4 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಹರತಾಳು ಶ್ರೀ ರಾಘವೇಂದ್ರಭಟ್ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಪ್ರಮುಖ್ ವಾಕೋಡ್ ಇವರ ಪೌರೋಹಿತ್ಯದಲ್ಲಿ ದೇವಿಯ ಸನ್ನಿಧಿಯಲ್ಲಿ ಕಲಾಭಿವೃದ್ದಿ ಹೋಮ ಶ್ರೀ ದುರ್ಗಾಹೋಮ 108 ಕಲಶಾಪಪೂರ್ವಕ ಸಾಮೂಹಿಕ ಕುಂಭಾಭಿಷೇಕ ಮತ್ತು ಪರಿವಾರ ದೇವತೆಗಳಿಗೆ ಕಲಾಹೋಮ ನವಕಾಭಿಷೇಕ ಪೂಜೆ ನಾಗ ಪೂಜೆ ಜರುಗಲಿದೆ.
ವಿಶೇಷ ಅಲಂಕಾರ ಪೂಜೆಯ ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಸಹ ನಡೆಯಲಿದ್ದು ರಾತ್ರಿ 7 ಗಂಟೆ ಅಲಸೆ ಶ್ರೀಚಂಡಿಕೇಶ್ವರಿ ನಾಗೇಶ್ವರಿ ಶ್ರೀಸುಬ್ರಹ್ಮಣ್ಯ ಕೃಪಾಶ್ರಿತ ಯಕ್ಷಗಾನ ಮೇಳದವರಿಂದ `ಪಂಚಾಕ್ಷರಿ ಮಹಿಮೆ ’’ಶ್ವೇತಕುಮಾರ ಚರಿತೆ’ ಎಂಬ ಪೌರಾಣಿಕ ಕಾಲಮಿತಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದ್ದು ಸಕಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.