ನಾನೆಂದು ಅಭಿವೃದ್ದಿ ಪರ ; ಅಮ್ಮನಘಟ್ಟದಲ್ಲಿ ಶಾಸಕ ಬೇಳೂರು ಹೇಳಿಕೆ

Written by Mahesha Hindlemane

Updated on:

ಹೊಸನಗರ ; ಮಲೆನಾಡು ಭಾಗದ ಆರಾಧ್ಯದೈವ ತಾಲೂಕಿನ ಕೋಡೂರು ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಮೂರನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ನೂರಾರು ಭಕ್ತವೃಂದದೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1ZVYh9RpS4/

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂದರ ಪ್ರಕೃತಿ ಮಡಿಲಿನ ಈ ಕ್ಷೇತ್ರವು ಮುಂದೆ ಸಿಗಂದೂರು ಶ್ರೀ ಕ್ಷೇತ್ರದಂತೆ ರಾರಾಜಿಸುವುದರಲ್ಲಿ ಅನುಮಾನವಿಲ್ಲ. ಭಕ್ತಾದಿಗಳಿಗೆ ಹಾಗು ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ದೊರೆತಲ್ಲಿ ಇದೊಂದು ಪ್ರಸಿದ್ದ ಪ್ರವಾಸಿತಾಣ ಆಗಲಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರವೂ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿತಾಣವಾಗಿ ಗುರುತಿಸಿದೆ. ಕ್ಷೇತ್ರದ ಮಹಿಮೆಯಿಂದಲೇ ವಾರ್ಷಿಕ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಧನ್ಯತಾಭಾವ ಹೊಂದುತ್ತಿದ್ದಾರೆ. ಅಮ್ಮನ ಶಕ್ತಿ ಅಗಾದವಾಗಿದ್ದು ಪಿತೃಪಕ್ಷ ಹಾಗು ನವರಾತ್ರಿ ದಿನಗಳಲ್ಲಿ ನಡೆಯುವ ಅದ್ದೂರಿ ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೆ ತಾವು ಶಾಸಕರಾಗಿದ್ದಾಗ ಶ್ರೀ ಕ್ಷೇತ್ರದ ಅಭಿವೃದ್ದಿಗಾಗಿ ₹ 10 ಲಕ್ಷ ಅನುದಾನ ಕೊಟ್ಟಿದ್ದೆ. ಆದರೆ, ಕಾರಣಾಂತರದಿಂದ ಅದು ಬಳಕೆಯಾಗದೆ ಸರ್ಕಾರ ಹಿಂಪಡೆಯಿತು. ತಾವು ಈಗಲೂ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕಟಿಬದ್ದರಾಗಿದ್ದು, ಪ್ರಸಕ್ತ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಿಫಾರಸ್ಸಿನ ಮೇರೆಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ನೆರವು ನೀಡಲು ತಾವು ಶಾಸಕರಾಗಿ ಸಿದ್ದವಿರುವುದಾಗಿ ತಿಳಿಸಿದರು.

ಕ್ಷೇತ್ರಕ್ಕೆ ಅರಣ್ಯ ಇಲಾಖೆಯಿಂದ ಸಾಕಷ್ಟು ತೊಂದರೆಯಿತ್ತು. ಈಗ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ಸುಮಾರು 25 ಎಕರೆಯಷ್ಟು ಭೂ ಪ್ರದೇಶ ಕ್ಷೇತ್ರಕ್ಕೆ ಸೇರಿದ್ದು, ಹಳೇ ಅಮ್ಮನಘಟ್ಟ ಹಾಗೂ ಹೊಸ ಅಮ್ಮನಘಟ್ಟದ ನಡುವೆ ರೋಪ್ ವೇ ನಿರ್ಮಾಣ ಮಾಡುವ ಉದ್ದೇಶವಿದೆ. ಅದಕ್ಕೆ ಸಾಕಷ್ಟು ಅನುದಾನ ಬೇಕಾಗುವ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗುವುದು ಅಲ್ಲದೆ, ಭಕ್ತಾದಿಗಳಿಗಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣ ಮಾಡುವ ಯೋಜನೆ ಸಹ ಇದೆ. ಈ ಹಿಂದಿನ ವ್ಯವಸ್ಥಾಪನ ಸಮಿತಿ ಮಾಜಿ ಶಾಸಕ ಸ್ವಾಮಿರಾವ್ ನೇತೃತ್ವದಲ್ಲಿ ಭಕ್ತರಿಗೆ ಬೇಕಾಗುವ ಎಲ್ಲಾ ಅಗತ್ಯ ಅನುಕೂಲ ಕಾರ್ಯಕ್ರಮಗಳನ್ನು ಪೂರೈಸಿವೆ. ಶಾಸಕನಾಗಿ ನನಗೂ ಕೆಲವು ಜವಾಬ್ದಾರಿಗಳಿದ್ದು, ಕ್ಷೇತ್ರದ ಭಕ್ತರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಕ್ಷೇತ್ರಕ್ಕೆ ಕೋಟೆಕಾನು, ಜೇನಿ ಹಾಗೂ ಮಾವಿನಹೊಳೆ ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಕೈ ಜೋಡಿಸುತ್ತೇನೆ ಎಂದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1EmGHKYuuw/

ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಕವಡೆಕಾಸಿನ ಅನುದಾನ ನೀಡಿಲ್ಲ:

ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ವಿರೋಧಿಗಳು ₹ 1 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು ಎಂದು ಭಕ್ತಾದಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೆ ಮೇಲಷ್ಟೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಅಭಿವೃದ್ದಿ ಪರ ನೀಲಿನಕಾಶೆ ತಯಾರಿಸಿ, ಹಲವು ಜನಪರ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಾಗುವುದು ಎಂದರು.

ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬೇಕಾದಲ್ಲಿ ಮತ್ತಷ್ಟು ನೀಡಲು ತಾವು ಸದಾಸಿದ್ದ. ಆದರೆ, ಅಪಪ್ರಚಾರಕ್ಕೆ ಭಕ್ತಾದಿಗಳು ಕಿವಿಗೊಡಬಾರದು.
– ಬೇಳೂರು ಗೋಪಾಲಕೃಷ್ಣ, ಶಾಸಕ

ಇದೇ ಸಂದರ್ಭದಲ್ಲಿ ಶ್ರೀ ದೇವಿಯ ಜಾತ್ರಾ ಮಹೋತ್ಸವದ ವಿಶೇಷ ಸಂಚಿಕೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಬಿಡುಗಡೆ ಮಾಡಿದರು.

ಈ ವೇಳೆ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗು ದೇವಸ್ಥಾನದ ಕಾರ್ಯಾಧ್ಯಕ್ಷ ಕಲಗೋಡು ರತ್ನಾಕರ, ಜಿ.ಪಂ. ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ತಾ.ಪಂ. ಮಾಜಿ ಸದಸ್ಯ ಎರಗಿ ಉಮೇಶ್, ಗೌರಮ್ಮ, ಮುಂಬಾರು ಗ್ರಾ.ಪಂ. ಅಧ್ಯಕ್ಷ ಕುಮಾರ್, ಕೋಡೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್, ಮಾರುತಿಪುರ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಚಿಕ್ಕಜೇನಿ ಗ್ರಾ.ಪಂ. ಸದಸ್ಯ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment