ಸಂಕ್ರಾಂತಿಗೆ ಮೋದಿ ಬದಲಾವಣೆ ಆಗ್ತಾರೆ ಅಂತಾ ನಾನ್ ಹೇಳ್ತಿನಿ – ಆಗುತ್ತಾ !? ; ಸಚಿವ ಸಂತೋಷ್ ಲಾಡ್

Written by malnadtimes.com

Published on:

SHIVAMOGGA ; ನಕಲಿ ಕಾರ್ಮಿಕ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸೋಮವಾರ ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಡ್‌ಗಳನ್ನು ಕೊಡುವ ಏಜೆನ್ಸಿಗಳೇ ಹುಟ್ಟಿಕೊಂಡಿವೆ. ನಕಲಿ ಕಾರ್ಡ್‌ಗಳನ್ನು ಗುರುತಿಸಲು ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ದೂರುಗಳು ಕೂಡ ಬಂದಿವೆ. ಇದಕ್ಕಾಗಿ ಅಂಬೇಡ್ಕರ್ ಸೇವಾ ಕೇಂದ್ರವನ್ನು ತೆರೆಯಲಾಗುವುದು. ಸುಮಾರು 43 ಕೇಂದ್ರಗಳ ಮೂಲಕ ಸಂಚಾರಿ ವ್ಯಾನ್ ಗಳ ಮೂಲಕವೇ ಕಟ್ಟಡ ನಿರ್ಮಾಣಗಳ ಸ್ಥಳಕ್ಕೇ ಹೋಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ಪಕ್ಷ ಅಲ್ಲಿ ಕೆಲಸ ಮಾಡುವವರಿಗೆ ಕಾರ್ಡ್ ಇಲ್ಲದಿದ್ದರೆ ಕಾರ್ಡ್ ಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ನಕಲಿ ಕಾರ್ಡ್ ಮಾಡಿಕೊಡುವ ಏಜೆನ್ಸಿಗಳ ಮೇಲೆ ಸೂಕ್ತ ಕೈಗೊಳ್ಳಲಾಗುವುದು. ಏನೇ ಆದರೂ ಕಾರ್ಮಿಕರಿಗೆ ನೀಡುವ ಕಾರ್ಡ್‌ಗಳು ಸರ್ಕಾರದಲ್ಲಿ ನೋಂದಣಿಯಾಗಿರಲೇ ಬೇಕಾಗುತ್ತದೆ ಎಂದಿದ್ದಾರೆ.

ಬಾಲ ಕಾರ್ಮಿಕರನ್ನು ಗುರುತಿಸುವುದಷ್ಟೇ ಅಲ್ಲ, ಅವರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಬೇರೆ ರಾಜ್ಯಗಳಿಂದ ಬಂದಿರುತ್ತಾರೆ. ಅದನ್ನೂ ನೋಡಬೇಕಾಗುತ್ತದೆ. ಶಾಲೆ, ಬಿಡುವವರ ಸಂಖ್ಯೆ ಹೆಚ್ಚಾಗಲು ಬಾಲ ಕಾರ್ಮಿಕರಾಗುತ್ತಾರೆ ಎಂಬ ಆರೋಪವೂ ಇದೆ. ಕಟ್ಟಡ ಕಾರ್ಮಿಕರು ಈ ಎಲ್ಲಾ ಕಾರ್ಮಿಕರ ಕಲ್ಯಾಣಕ್ಕಾಗಿ ಬೇರೆ ದೇಶಗಳಿಂದ ಬಂದ ಕಾರ್ಮಿಕರನ್ನು ಗುರುತಿಸಲು ಮತ್ತು ಕೆಲಸ ನೀಡಲು ಹೊಸ ಕಾನೂನಿನ ಅಗತ್ಯವಿದೆ ಎಂದಿದ್ದಾರೆ.

ಇನ್ನು ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ, ಬಿಜೆಪಿ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 2020ರಲ್ಲಿ ಬಿಜೆಪಿ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸಿತ್ತು. ಈಗ ನಾವು ಅಷ್ಟೇ ಹೆಚ್ಚಿಸಿದ್ದೇವೆ. ಇದು ಹೇಗೆ ಹೆಚ್ಚಳ ಆಗುತ್ತದೆ. ಅವರೂ ಹೆಚ್ಚಳ ಮಾಡಿದರೆ ನ್ಯಾಯ. ನಾವು ಹೆಚ್ಚಳ ಮಾಡಿದರೆ ಅನ್ಯಾಯವೇ? ಶಕ್ತಿ ಯೋಜನೆಗೂ ಬಸ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಬೇರೆ ಯಾವುದೇ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಬಸ್‍ಗಳಿವೆ. ಅಲ್ಲದೇ, ಬಸ್ ಪ್ರಯಾಣದರ ಏರಿಕೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯೂ ಕಾರಣವಾಗುತ್ತದೆ. ಕೇಂದ್ರ ಸರ್ಕಾರ ಮನಸು ಮಾಡಿದರೆ ಲೀಟರ್ ಗೆ 40 ರೂ.ಗೆ ನೀಡಬಹುದಲ್ಲವೇ? ಏಕೆ ನೀಡುತ್ತಿಲ್ಲ. ಯಾವುದೇ ದರ ಏರಿಕೆಗೆ ಕೇಂದ್ರವೇ ಕಾರಣ ಎಂದಿದ್ದಾರೆ.

ಅದರಂತೆ, ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಹೆಸರು ಇದೆ ಎಂದು ಹೇಳುತ್ತಾರೆ. ಡೆತ್‌ನೋಟ್ ನಲ್ಲಿ ಅವರ ಹೆಸರು ಎಲ್ಲಿದೆ? ಯರಾದರೂ ನೋಡಿದ್ದಾರೆಯೇ? ಈಗಾಗಲೇ ಡೆತ್‌ನೋಟ್ ನಲ್ಲಿ ಇರುವವರ ಹೆಸರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಕರ ಸಂಕ್ರಾಂತಿಗೆ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೇಳಲಿ ಬಿಡಿ. ನಾನು ಕೂಡ ಮಕರ ಸಂಕ್ರಾಂತಿಗೆ ಮೋದಿ ಬದಲಾವಣೆ ಆಗುತ್ತಾರೆ ಎಂದು ಹೇಳುವೆ. ಆಗ್ತಾರಾ ? ಇಂತಹ ಹೇಳಿಕೆಗಳಿಗೆಲ್ಲಾ ಅರ್ಥವಿರುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದ್ದಾರೆ.

Leave a Comment