HOSANAGARA ; ತಾಲ್ಲೂಕಿನಲ್ಲಿರುವ ಗ್ರಾಮ ಆಡಳಿತಾಧಿಕಾರಿಗಳು ತಮಗೆ ಮೂಲಭೂತ ಸೌಲಭ್ಯವನ್ನು ಸರ್ಕಾರ ನೀಡುವವರೆಗೆ ಕೆಲವು ಕೆಲಸಗಳನ್ನು ಸ್ಥಗಿತಗೊಳ್ಳಿಸುವುದಾಗಿ ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಗ್ರಾಮ ಆಡಳಿತಾಧಿಕಾರಿ ಕೌಶಿಕ್, ಇಲಾಖೆಯಿಂದ ಅಭಿವೃದ್ದಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಹಾಗೂ ಲ್ಯಾಪ್‌ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್ ಹಾಗೂ ಬ್ಯಾನರ್‌ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಾವು ನೋವುಗಳು ಆಗುತ್ತಿದ್ದು, ನಿರಂತರವಾಗಿ ಮಾರಣಾಂತಿಕ ಹಲ್ಲೆ ನಡೆಯುತ್ತಿರುತ್ತದೆ. ಎಲ್ಲಾ ಮೊಬೈಲ್ ಆಪ್ ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ನಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿದೆ.
ಸೆ.22 ರಿಂದ ಆಧಾರ್‌ಸೀಡ್ ಲ್ಯಾಂಡ್ ಬೀಟ್ ಬಗೈರ್ ಹುಕುಂ ಹಕ್ಕುಪತ್ರ ನಮೂನೆ 1-5ರ ವೆಬ್‌ಅಪ್ಲಿಕೇಷನ್, ಪೌತಿ ಆಂದೋಲನ ಆಪ್‌ಗಳ ಕೆಲಸ ಸ್ಥಗಿತಗೊಳಿಸಲಾಗುವುದು ಇದರ ಜೊತೆಗೆ ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಮೆರಾ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ ಗೂಗಲ್‌ಕ್ರೋಮ್ ಬುಕ್, ಲ್ಯಾಪ್‌ಟಾಪ್ ಪ್ರಿಂಟರ್ ಮತ್ತು ಸ್ಕ್ಯಾನರ್ ಸೌಲಭ್ಯಗಳನ್ನು ಸರ್ಕಾರ ನೀಡಬೇಕು, ಆದ್ದರಿಂದ ನಮಗೆ ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್‌ಟಾಪ್, ಗೂಗಲ್‌ಕ್ರೋಮ್ ಬುಕ್, ಪ್ರಿಂಟರ್, ಇಂಟರ್‌ನೆಟ್ ಸೌಲಭ್ಯವನ್ನು ನೀಡಬೇಕು ಎಂಬ ಬೇಡಿಕೆಗಳೊಂದಿಗೆ ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳು ಪದೋನ್ನತಿಯಲ್ಲಿ ವಂಚಿತರಾಗಿ ಸುಮಾರು 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ, ರಾಜ್ಯದಲ್ಲಿನ 1196 ಗ್ರೇಡ್-1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು “ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ” ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು, ಪ್ರಥಮದರ್ಜೆ ಸಹಾಯಕರು, ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ನೀಡಬೇಕು.
ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡಬೇಕು.
ಈ ಎಲ್ಲ ಬೇಡಿಕೆಗಳು ಈಡೇರಿಸುವವರೆಗೆ ಸೆ. 26 ರಿಂದ ಮೊಬೈಲ್ ಆಪ್ ಹಾಗೂ ವೆಬ್ ಆಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಿ ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ನೌಕರರ ಸಂಘದ ಅಧ್ಯಕ್ಷ ಸುಧೀಂದ್ರಕುಮಾರ್ ಶಿರಾಸ್ಥೆದಾರ್ ಮಂಜುನಾಥ್ ಕಟ್ಟೆ, ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ನವೀನ್, ರೇಣುಕಯ್ಯ, ಸಿದ್ದೇಶ್, ಮಂಜುನಾಥ್, ಸುರೇಶ್, ಸುನೀಲ್, ಬಸವರಾಜ್, ಭೂಮಿಕಾ, ದೀಪು, ಇಂದಿರಮ್ಮ, ಅಂಬಿಕಾ, ಅನುಷಾ, ಗ್ರಾಮ ಸಹಾಯಕರಾದ ನಾಗಪ್ಪ, ಅಶೋಕ, ನಾಗರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.