ಹೊಸನಗರ ; ತಾಲ್ಲೂಕಿನ ಜೀವನದಿ ಶರಾವತಿ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತಿದ್ದು ಇದಕ್ಕೂ ನಮಗೂ ಏನು ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಹೌದು, ಹಗಲು-ರಾತ್ರಿ ಎನ್ನದೇ ಯಾರ ಭಯವು ಇಲ್ಲದೇ ಸಂಜೆ 7 ಗಂಟೆಯಿಂದ ಬೆಳಗಿನಜಾವ 4 ಗಂಟೆಯವರೆಗೆ ಮುಖ್ಯ ರಸ್ತೆಗಳಲ್ಲಿ ಟಿಪ್ಪರ್ ಲಾರಿಗಳು ಓಡಾಟ ನಡೆಯುತ್ತಿದೆ. ಹೊಸನಗರ ಸುತ್ತ-ಮುತ್ತ ಶರಾವತಿ ಹಿನ್ನೀರು ಪ್ರದೇಶವಾದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಸಟ್ಟೆ, ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಡಚಿಟ್ಟೆ, ಮಾರುತಿಪುರ ಗ್ರಾ.ಪಂ. ವ್ಯಾಪ್ತಿಯ ತೋಟದಕೊಪ್ಪ ಗ್ರಾಮದಲ್ಲಿ ಸಾಕಷ್ಟು ಮರಳು ಶೇಖರಣೆ ಮಾಡುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ಸಾಗಾಣಿಕೆ ನಡೆಯುತ್ತಿದೆ.
ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕುತ್ತು !
ಶರಾವತಿ ನದಿಯಿಂದ ವರ್ಷ ಪೂರ್ತಿ ರಾಮಕೃಷ್ಣ ಶಾಲೆಯ ಹಿಂಭಾಗವಿರುವ ಪಂಪ್‌ಹೌಸ್‌ನಿಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸುಮಾರು 2000 ಮನೆಗಳಿಗೆ ನಲ್ಲಿ ನೀರು ಕೊಡುತ್ತಿದ್ದಾರೆ. ಆದರೆ ನಲ್ಲಿ ನೀರು ಶೇಖರಣೆ ಮಾಡುವ ಪಂಪ್ ಹೌಸ್ ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದರಿಂದ ನೀರು ಕೆಂಪು ಬಣ್ಣದಕ್ಕೆ ತಿರುಗುವುದರ ಜೊತೆಗೆ ಮರಳು ನೀರಿನಿಂದ ಹೊರ ತೆಗೆಯುತ್ತಿರುವುದರಿಂದ ಅಲ್ಲಿ ಶೇಖರಣೆಗೊಂಡ ನೀರು ಬತ್ತಿ ಹೋಗುತ್ತದೆ. ಹೊಸನಗರದ ಸಾರ್ವಜನಿಕರ ಮನೆಗಳಿಗೆ ಕುಡಿಯುವ ನೀರು ಕೊರತೆಯಾಗಲಿದೆ ಎಂದು ಹೇಳಲಾಗಿದೆ. ಹೊಸನಗರ ಪಟ್ಟಣದ ನಿವಾಸಿಗಳು ತಕ್ಷಣ ಎಚ್ಚರಗೊಳ್ಳದಿದ್ದರೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಹೊಸನಗರದಲ್ಲಿ ನೀರಿಗೆ ಬರ ಗ್ಯಾರಂಟಿ ಎಂದು ಹೇಳಲಾಗಿದೆ.

ಯಾರು ಹೊಣೆ ?
ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳಲ್ಲಿ ಸುಮಾರು 300 ಕ್ಕಿಂತಲ್ಲೂ ಹೆಚ್ಚು ಹೊರ ರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ರಾತ್ರಿ-ಹಗಲು ಎನ್ನದೆ ನದಿಯ ಆಳಕ್ಕೆ ಇಳಿದು ಮರಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಆಕಸ್ಮಿಕವಾಗಿ ಕೆಲಸ ಮಾಡುವವರಿಗೆ ಅನಾಹುತವಾದರೇ ಹೊಣೆಯಾರು? ಎಂಬ ಪ್ರಶ್ನೆ ಮೂಡುವುದರ ಜೊತೆಗೆ ಹೊಸನಗರದ ಸುತ್ತ-ಮುತ್ತ ಕಾಡಿನೊಳಗೆ ಅವರು ವಾಸ ಮಾಡುತ್ತಿರುವುದರಿಂದ ಕಳ್ಳತನ, ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳು ನಡೆದರೆ ಹೊಣೆಯಾರು? ಎಂದು ಹೊಸನಗರದ ಪ್ರಜ್ಞಾವಂತ ಪ್ರಜೆಗಳು ಕೇಳುತ್ತಿದ್ದಾರೆ.
ಈ ಹಿಂದಿನ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಹೊರ ರಾಜ್ಯದವರನ್ನು ಗುರುತಿಸಿ ಗಡಿಪಾರು ಮಾಡಿದ ಉದಾಹರಣೆಗಳಿವೆ. ಆ ಕೆಲಸವನ್ನು ದಕ್ಷ ಪ್ರಾಮಾಣಿಕರೆನಿಸಿಕೊಂಡಿರುವ ತಹಸೀಲ್ದಾರ್ ಭರತ್‌ರಾಜ್, ಸಿಬ್ಬಂದಿ ವರ್ಗ ಮಾಡಬೇಕಾಗಿದ್ದು, ಗಡಿಪಾರು ಶಿಕ್ಷೆ ನೀಡದಿದ್ದರೆ ಮುಂದೆ ಯಾವುದೇ ಅನಾಹುತ ನಡೆದರೆ ತಹಸೀಲ್ದಾರ್‌ರವರೇ ನೇರ ಹೊಣೆಗಾರರಾಗುತ್ತಾರೆ. ಈ ಕೆಲಸ ಈಗಿನಿಂದಲೇ ಪ್ರಾರಂಭಿಸುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





