HOSANAGARA ; ಮೊದಲೇ ಮಳೆನಾಡು. ವಿದ್ಯುತ್ ಕೈಕೊಟ್ಟರೆ ಬದುಕೇ ದುಸ್ತರ ಎನ್ನುವ ಆತಂಕದಲ್ಲಿ ದಿನ ದೂಡುತ್ತಿರುವ ಜನ. ಪರಸ್ಪರ ಸಂಪರ್ಕ ಸಾಧಿಸಲು ಇತ್ತೀಚೆಗೆ ಪ್ರತಿ ಗ್ರಾಮಗಳಲ್ಲೂ ಮೊಬೈಲ್ ಮೊರೆ ಹೊಗುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಂದು ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಹ ಕನಸಾಗಿದೆ.
ಈ ಹಿನ್ನೆಲೆಯ ಸಂಪರ್ಕ ಸಾಧಿಸಲು ಹಣ ಎಷ್ಟೇ ವ್ಯಯ ಆದರೂ ಚಿಂತಿಸದೆ ಕೇಬಲ್ ಸಂಪರ್ಕ, ಮೈಕ್ರೋ ಫೈಬರ್ ಸಂಪರ್ಕಕ್ಕೆ ಜನತೆ ಮುಂದಾಗಿದ್ದಾರೆ.
ಇತ್ತೀಚೆಗೆ ತಾಲೂಕಿನ ನಿಟ್ಟೂರು ಗ್ರಾಮದ ಹತ್ತಾರು ಮಂದಿ ಜಿಯೋ ಕಂಪನಿಗೆ ಸೇರಿದ 5ಜಿ ನೆಟ್‌ವರ್ಕ್ ಸಂಪರ್ಕವನ್ನು ತಲಾ ನಾಲ್ಕೈದು ಸಾವಿರ ಹಣ ನೀಡಿ ಪಡೆದಿದ್ದರು. ನಿಟ್ಟೂರು ಸಮೀಪದ ಗೌರಿಕೆರೆಯಲ್ಲಿನ ಏರ್ಟೆಲ್ ಟವರ್‌ಗೆ ಜಿಯೋ ಫೈಬರ್‌ನ 5ಜಿ ಸಂಪರ್ಕ ಕಲ್ಪಿಸಲಾಗಿತ್ತು. ಇದರಿಂದ ಮೊಬೈಲ್, ಸಿಸಿಟಿವಿ, ಟಿವಿ ಸೇರಿದಂತೆ ಸಾಫ್ಟ್‌ವೇರ್ ಇಂಜಿನಿಯರ್‌ಗಳ ವರ್ಕ್ ಫ್ರಂ ಹೋಂ ಕಾರ್ಯ ಸಹ ಸರಾಗವಾಗಿ ನಡೆದಿತ್ತು.
ಕಳೆದ 15 ದಿನಗಳ ಹಿಂದಷ್ಟೆ ತಾಲೂಕಿನ ನಿಟ್ಟೂರು ಸಮೀಪದ ಗೌರಿಕೆರೆಯಲ್ಲಿನ ಏರ್ಟೆಲ್ ಟವರ್‌ಗೆ ಸಿಡಿಲು ಅಪ್ಪಳಿಸಿದ ಪರಿಣಾಮ ಎಲ್ಲಾ ಸಂಪರ್ಕ ಸೌಲಭ್ಯಗಳ ಏಕಾಏಕಿ ಕೈಕೊಟ್ಟಿತು. ಜನವಿರಳ ಪ್ರದೇಶವಾದ ಕೊಡಚಾದ್ರಿ ತಪ್ಪಲಿನ ನಿಟ್ಟೂರು ಗ್ರಾಮವು ಯಾವುದೇ ಆಧುನಿಕ ತಾಂತ್ರಿಕ ಸೌಲಭ್ಯಗಳ ಸಂಪರ್ಕ ಇಲ್ಲದೆ ದೂರವೇ ಉಳಿದಿದೆ. ಟವರ್ ದುರಸ್ತಿ ಮಾಡುವಂತೆ ಹಲವಾರು ಬಾರಿ ಇಲ್ಲಿನ ಗ್ರಾಮಸ್ಥರು ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿನ ಜಿಯೋ ಕಂಪನಿ ಕಚೇರಿಗೆ ಭೇಟಿ ನೀಡಿ ಒತ್ತಾಯ ಹಾಕಿದರೂ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಆಧುನಿಕ ತಂತ್ರಜ್ಞಾನ ಬಳಕೆಯಿಂದ ದೂರವೇ ಉಳಿದಿರುವ ಹಾಗೂ ಬಳಕೆದಾರರಿಗೆ ಸೂಕ್ತ ಸೌಲಭ್ಯ ನೀಡಲು ವಿಫಲ ಆಗಿರುವ ಜಿಯೋ 5ಜಿ ಕಂಪನಿಯ ಕಾರ್ಯವೈಖರಿ ಕುರಿತು ಗ್ರಾಹಕರು ಮಾಧ್ಯಮದ ಮೊರೆ ಹೋಗಿದ್ದಾರೆ.
ಈ ಕೂಡಲೇ ಗೌರಿಕೆರೆಯಲ್ಲಿನ ಜಿಯೋ ಫೈಬರ್ 5ಜಿ ಆಂಟೆನಾ ದುರಸ್ತಿ ಮಾಡುವಂತೆ ಗ್ರಾಹಕರು ಕಂಪನಿಯನ್ನು ಒತ್ತಾಯಿಸಿದ್ದಾರೆ.
ತಪ್ಪಿದಲ್ಲಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.