ಅಮ್ಮನಘಟ್ಟ ದೇವಸ್ಥಾನದ ಸುಮಾರು 28 ಲಕ್ಷ ರೂ. ಹಣ ಸರ್ಕಾರದ ಖಜಾನೆಗೆ ಜಮಾ ಮಾಡಲಾಗಿದೆ ; ಕಲಗೋಡು ರತ್ನಾಕರ್ ಸ್ಪಷ್ಟನೆ

Written by malnadtimes.com

Updated on:

HOSANAGARA ; ಸುಮಾರು 2012ರಿಂದ 2022ರವರೆಗೆ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿ ನಾನು ಸೇವೆ ಮಾಡಿದ್ದೇನೆ. ಸಾಕಷ್ಟು ಹಣವನ್ನು ಸರ್ಕಾರದಿಂದ ಹಾಗೂ ದೇಣಿಗೆಯ ರೂಪದಲ್ಲಿ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೇ ಎಲ್ಲ ಪಕ್ಷದವರನ್ನು ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿಕೊಂಡು ದೇವಸ್ಥಾನದ ಏಳಿಗೆಗಾಗಿ ಕೆಲಸ ಮಾಡಿದ್ದೇನೆ ಎಂದು ಜೇನುಕಲ್ಲಮ್ಮ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್‌ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದಿನ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪಕರ ಬಳಿ 16 ಲಕ್ಷ ಹಣವಿದೆ. ದೇವಸ್ಥಾನದ ಅಭಿವೃದ್ದಿಗೆ ಹಣ ನೀಡುತ್ತಿಲ್ಲ ಎಂದು ಪತ್ರಿಕಾಘೋಷ್ಠಿಯಲ್ಲಿ ಮಾಜಿ ಶಾಸಕರು ಹಾಗೂ ಹಾಲಿ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಬಿ.ಸ್ವಾಮಿರಾವ್‌ ನಮ್ಮ ವಿರುದ್ಧ ದೂರಿದ್ದು, ಆದರೆ ನಾವು ಇವರಿಗೆ ಹಣ ಕೋಡಲು ಬರುವುದಿಲ್ಲ. ನಾವು ಕಂದಾಯ ಇಲಾಖೆಯ ಖಜಾನೆಗೆ ಅಥವಾ ಶಾಸಕರಿಗೆ ಲೆಕ್ಕ ನೀಡಬೇಕೆ ಹೊರತು ಇವರು ಕೇಳಿದ ತಕ್ಷಣ ಹಣ ಕೊಡಲು ಬರುವುದಿಲ್ಲ ಎಂದರು.

ದೇವಸ್ಥಾನದ ಗಂಟು ತಿನ್ನಲು ಸಂಚು ಮಾಡಿಲ್ಲ!

ನಾನು 10 ವರ್ಷಗಳ ಜೇನುಕಲ್ಲಮ್ಮ ದೇವಸ್ಥಾನದ ಸಮಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ 5.50 ಕೋಟಿ ರೂ. ನಷ್ಟು ಕೆಲಸ ಮಾಡಿಸಿದ್ದೇವೆ. 3 ಕೋಟಿಯಷ್ಟು ಹಣವನ್ನು ಸರ್ಕಾರದಿಂದ ತಂದು ಉತ್ತಮ ರಸ್ತೆ ಮಾಡಿಸಿದ್ದೇವೆ. 70 ಲಕ್ಷದಷ್ಟು ಹಣ ವ್ಯಯ ಮಾಡಿ ದೇವಸ್ಥಾನ ಅಭಿವೃದ್ಧಿಪಡಿಸಿದ್ದೇವೆ. ಊಟದ ವ್ಯವಸ್ಥಗೆ ಹಾಲ್ ಇರಲಿಲ್ಲ ಸಾರ್ವಜನಿಕರಿಗೆ ಊಟದ ಕೊಠಡಿ ನಿರ್ಮಿಸಿದ್ದೇವೆ. ಈ ಜೇನುಕಲ್ಲಮ್ಮ ದೇವಸ್ಥಾನದ ಸರ್ವೆನಂಬರ್ 63ರ 27ಎಕರೆ ಪ್ರದೇಶ ಅರಣ್ಯ ಭೂಮಿಯಾಗಿದ್ದು ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರ ಕೃಪಕಟಾಕ್ಷದಿಂದ ಅರಣ್ಯ ಭೂಮಿಯ ಖಾತೆಯನ್ನು ಸರ್ಕಾರಿ ಭೂಮಿಯನ್ನಾಗಿ ಪರಿವರ್ತಿಸಿದ್ದೇವೆ. ನೀರಿನ ವ್ಯವಸ್ಥೆಗಾಗಿ ಬೋರ್‌ವೇಲ್‌ಗಳನ್ನು ತೆಗೆಸಲಾಗಿದೆ. ಒಂದು ಸುಂದರ ದೇವಸ್ಥಾನವನ್ನಾಗಿ ಮಾಡಲು ಶ್ರಮಿಸಿದ್ದೇವೆ. ನಮ್ಮ ಅವಧಿ 8 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಚಿನ್ನವನ್ನು ತೆಗೆದು ದೇವಿಗೆ ಎರಡು ಚಿನ್ನದ ಸರವನ್ನು ಮಾಡಿಸಿದ್ದೇವೆ. ಅಂದು 28ಲಕ್ಷ ಹಣವನ್ನು ಕಂದಾಯ ಇಲಾಖೆಯ ಖಜಾನೆಗೆ ಜಮಾ ಮಾಡಲಾಗಿದೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಮಾಡಬೇಕೆನ್ನುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯದಲ್ಲಿಯೇ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರೂ ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ಥಾನದ ಏಳಿಗೆಗಾಗಿ ಶ್ರಮಿಸಿದ್ದೇವೆಯೇ ಹೊರತು ದೇವಸ್ಥಾನದ ಗಂಟು ತಿನ್ನಲು ಎಂದು ಸಂಚು ಮಾಡಿಲ್ಲ ಎಂದರು.

ಶಾಸಕರಿಗೆ ಕಿಮ್ಮತ್ತಿಲ್ಲ :

ಈ ದೇವಸ್ಥಾನ ಕಮಿಟಿಯಲ್ಲಿ ಶಾಸಕರು ಗೌರವಾಧ್ಯಕ್ಷರಾಗಿರುತ್ತಾರೆ. ಆದರೇ ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಶಾಸಕರಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದ್ದು ಇಲ್ಲಿಯವರೆಗೆ ದೇವಸ್ಥಾನಕ್ಕೆ ಕರೆದು ಒಂದು ಶಾಲು ಹಾಕಿಲ್ಲ ಗೌರವಯುತವಾಗಿ ನಡೆದುಕೊಂಡಿಲ್ಲ. ಮುಂದಿನ ದಿನದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ತುರ್ತು ಸಭೆ ಕರೆಯಲಿದ್ದಾರೆ ಎಂದರು.

ಮೂರು ಗ್ರಾಮ ಪಂಚಾಯತಿಗೆ ಒಂದೇ ದೇವಸ್ಥಾನ :

ಹೊಸನಗರ ತಾಲ್ಲೂಕಿನ ಜೇನುಕಲ್ಲಮ್ಮ ದೇವಸ್ಥಾನ ಮಾರುತಿಪುರ, ಚಿಕ್ಕಜೇನಿ ಹಾಗೂ ಕೋಡೂರು ಮೂರು ಗ್ರಾಮ ಪಂಚಾಯತಿಗೆ ಒಳ ಪಡುತ್ತದೆ. ಈ ಮೂರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ದೇವಸ್ಥಾನದ ಸಮಿತಿಯ ಸದಸ್ಯರಾಗಿರುತ್ತಾರೆ. ಆದರೇ ಸೌಜನ್ಯಕ್ಕೂ ಇವರನ್ನು ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ಇವರಿಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡುತ್ತಾರೆ ಎಂದು ದೂರಿದರು.

ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ಒಡಕು :

ಮಾಜಿ ಶಾಸಕ ಹರತಾಳು ಹಾಲಪ್ಪನವರು ಶಾಸಕರಾಗಿದ್ದಾಗ ನೂತನ ದೇವಸ್ಥಾನ ಕಮಿಟಿ ರಚಿಸಲಾಯಿತು. ಹಿಂದಿನ ಕಮಿಟಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಯಾವುದೇ ಜಾತಿಯತೆ ಪಕ್ಷ ಭೇದವಿಲ್ಲದೆ ಎಲ್ಲ ಗ್ರಾಮದ ಸದಸ್ಯರನ್ನು ಒಳಗೊಂಡ ಸಮಿತಿ ಇತ್ತು. ಆ ಕಮಿಟಿಯನ್ನು ರದ್ದುಪಡಿಸಿದ ಶಾಸಕ ಹರತಾಳು ಹಾಲಪ್ಪನವರು ಹೊಸ ಕಮಿಟಿ ರಚಿಸಲಾಯಿತು. ಬಿ.ಸ್ವಾಮಿರಾವ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ ಅವರಿಗೆ ಬೇಕಾದವರನ್ನು ಮಾತ್ರ ಸಮಿತಿಯಲ್ಲಿ ಇಟ್ಟುಕೊಳ್ಳಲಾಯಿತು. ಇದಕ್ಕೆ ನಾವು ತಕರಾರು ಮಾಡಿದಾಗ 5 ಜನರ ಪಟ್ಟಿ ಕಳುಹಿಸಿಕೊಡಿ ಎಂದು ಹೇಳಿದರು ನಾವು ಐದು ಜನರ ಪಟ್ಟಿ ಕಳುಹಿಸಿಕೊಟ್ಟರೆ ಇಲ್ಲಿಯವರೆಗೂ ನೂತನ ಸಮಿತಿಯಲ್ಲಿ 5 ಜನರನ್ನು ಸೇರಿಸಿಕೊಳ್ಳದೇ ಹಳೆಯ ಸಮಿತಿಯವರನ್ನೇ ಮುಂದುವರೆಸಿದ್ದು ಇಷ್ಟೆಲ್ಲ ಜಂಜಾಟಕ್ಕೆ ಕಾರಣವಾಗಿದೆ ಎಂದರು.

ಕಟ್ಟಡಕ್ಕೆ ಒಂದು ನಯಾಪೈಸೆ ಹಾಕಿಲ್ಲ:

ನೂತನ ಸಮಿತಿ ರಚನೆಯಾದ ತಕ್ಷಣ ನಾವು ಸರ್ಕಾರದಿಂದ ಆರು ಕೋಟಿ ಹಣ ತಂದು ದೇವಸ್ಥಾನ ಕಟ್ಟುತ್ತೇವೆ ಎಂದು ಹೇಳಿದವರು ಇಂದಿಗೂ ಒಂದು ನಯಾಪೈಸೆ ಹಣ ಸರ್ಕಾರದಿಂದ ತಂದಿಲ್ಲ. ನಾವು ದೇಣಿಗೆ ರೂಪದ ಹಣ ಹಾಗೂ ನಾವು ಅಂದು ತಂದಿರುವ ಹಣದಲ್ಲಿ ದೇವಸ್ಥಾನದ ಕಟ್ಟಡ ಕಾಮಗಾರಿ ಕೆಲಸ ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ನಮ್ಮ ಶಾಸಕರ ಮೂಲಕ ಸರ್ಕಾರದಿಂದ ಹಣ ತರುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಈ ಪತ್ರಿಕಾಘೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಿದಂಬರ, ಮಾರುತಿಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಿಕಾ, ಗುರುರಾಜ್ ಭಟ್, ಶಂಕರ ಶೆಟ್ಟಿ, ಎಂ.ಪಿ ಸುರೇಶ್, ಚಂದ್ರಪ್ಪ, ಸಂತೋಷ, ಉಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment