HOSANAGARA ; ಇಲ್ಲಿನ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರ-4ರಿಂದ ಅಭ್ಯರ್ಥಿ ಸಂಘದ ನಿವೃತ್ತ ನೌಕರ ಹೆಚ್. ಶ್ರೀನಿವಾಸ್ ಅವರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ್ ವಿರುದ್ಧ 10 ಮತಗಳ ಅಂತರದಿಂದ ಗೆಲುವು ಸಾಧಿಸಿ ಇದೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದರು. ಒಟ್ಟಾರೆ 371 ಮತಗಳಿದ್ದು, ಬಿ.ಜಿ. ನಾಗರಾಜ್ 164 ಮತಗಳಿಸಿದರೆ, ಶ್ರೀನಿವಾಸ್ 174 ಮತಗಳಿಸಿದರು. ಪತ್ರಕರ್ತ ವಿಶ್ವೇಶ್ವರಯ್ಯ 7 ಮತ ಪಡೆದರೆ, 3 ತಿರಸ್ಕೃತಗೊಂಡವು.
ಸಾಲಗಾರ ಕ್ಷೇತ್ರ-1ರಲ್ಲಿ ಒಟ್ಟಾರೆ 313 ಮತವಿದ್ದು, 284 ಮತ ಚಲಾವಣೆ ಆಯ್ತು. ನಿಕಟಪೂರ್ವ ಅಧ್ಯಕ್ಷ ಡಿ.ಆರ್. ವಿನಯಕುಮಾರ್ 244 ಮತ ಪಡೆದರೆ, ಮಾಜಿ ನಿರ್ದೇಶಕ ಜಿ.ಎಸ್. ರವಿ ಗುಬ್ಬಿಗ 239 ಮತಗಳಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿ ಈಶ್ವರಪ್ಪ ವಿರುದ್ದ ಭರ್ಜರಿ ಗೆಲುವು ಸಾಧಿಸಿ, ಮತ್ತೊಮ್ಮೆ ಆಯ್ಕೆಯಾದರು. ಈಶ್ವರಪ್ಪ 66 ಮತ ಪಡೆದರೆ, 2 ಮತ ತಿರಸ್ಕೃತಗೊಂಡವು.
ಈ ಹಿಂದೆಯೇ, ವಿನಯ್ ಕುಮಾರ್ ನೇತೃತ್ವದಲ್ಲಿ ಸಂಘಕ್ಕೆ 9 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಇಂದು ನಡೆದ ಚುನಾವಣೆಯಲ್ಲಿ ಮತ್ತೆ ಮೂರು ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವ ಮೂಲಕ ಎಲ್ಲಾ 12 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದು ವಿಶೇಷ.
ಬೇಳೂರು, ಆರ್‌ಎಂಎಂಗೆ ಅರ್ಪಣೆ :
ನಂತರ ಪತ್ರಕರ್ತರೊಂದಿಗೆ ದುಮ್ಮ ವಿನಯ್ ಕುಮಾರ್ ಮಾತನಾಡಿ, ಇಂದಿನ ವಿಜಯದ ಹಿಂದೆ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗು ಸಹಕಾರಿ ಧುರೀಣ ಡಾ. ಆರ್.ಎಂ. ಮಂಜುನಾಥಗೌಡರ ಸಲಹೆ, ಸಹಕಾರ, ಮಾರ್ಗದರ್ಶನವಿದೆ. ತಮ್ಮೆಲ್ಲ ಚುನಾವಣೆ ಪ್ರಕ್ರಿಯೆಗಳಲ್ಲಿ ಬೆಂಬಲವಾಗಿ ನಿಂತು ಸಹಕರಿಸಿದ ಬೇಳೂರು ಹಾಗು ಆರ್‌ಎಂಎಂ ಅವರಿಗೆ ಈ ಗೆಲುವನ್ನು ಅರ್ಪಿಸುತ್ತಿದ್ದೇನೆ ಎಂದರು.
ಮತ ನೀಡಿ ಸಹಕರಿಸಿದ ಸಂಘದ ಸದಸ್ಯರಿಗೆ ಇಡೀ ತಂಡ ಮುಂದೆಯೂ ಚಿರಋಣಿಯಾಗಿದ್ದು, ಅವರ ಅಷೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಸಂಘದ ಬಲವರ್ಧನೆಗೆ ಟೊಂಕಕಟ್ಟಿ ನಿಲ್ಲುವುದಾಗಿ ತಿಳಿಸಿದರು.
ಬೆಳಗಿನಿಂದ ಆರಂಭಗೊಂಡಿದ್ದ ಚುನಾವಣೆ ಪ್ರಕ್ರಿಯೆಗಳು ಸಂಜೆ ವೇಳೆಗೆ ಶಾಂತಿಯುತವಾಗಿ ಅಂತ್ಯಗೊಳ್ಳಲು ಪಿಎಸ್‌ಐ ಶಂಕರಗೌಡ ಪಾಟೀಲ್ ನೇತೃತ್ವದ ಪೊಲೀಸ್ ಬಂದೋಬಸ್ತ್ ಸಾಕ್ಷಿಯಾಯ್ತು. ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.