ಹೊಸನಗರ ; ಪ್ರಸಕ್ತ 2024-25ನೇ ಸಾಲಿನಲ್ಲಿ ಸಹಕಾರಿಗೆ ಒಟ್ಟು 35,400 ಅಡಿಕೆ ಮೂಟೆಗಳು ಆವಕವಾಗಿದ್ದು, ರೈತರ ಅಡಿಕೆ ಬೆಳೆ ಇಳುವರಿಯಲ್ಲಿ ವಿಪರೀತ ಇಳಿಮುಖ ಕಂಡು ಬಂದರೂ, ಸಹಕಾರಿಗೆ ಹಿಂದೆಂದಿಗಿಂತಲೂ ಅಧಿಕ ಅಡಿಕೆ ಆವಕವಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ. ರಾಘವೇಂದ್ರ ತಿಳಿಸಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಬುಧವಾರ ನಡೆದ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಹಕಾರಿಯಲ್ಲಿ ಒಟ್ಟು 5600 ಸದಸ್ಯರಿದ್ದು, ಒಟ್ಟು ರೂ. 18.24 ಕೋಟಿ ವಿವಿಧ ಬಗೆಯ ಸಾಲ ನೀಡಿದೆ.ವಾರ್ಷಿಕವಾಗಿ ವಿವಿಧ ರೂಪದಲ್ಲಿ ಒಟ್ಟು ರೂ. 21.68 ಕೋಟಿ ಠೇವಣಿ ಸಂಗ್ರಹವಾಗುತ್ತಿದೆ. ಸದಸ್ಯರಿಂದ ವರ್ಷಾಂತ್ಯಕ್ಕೆ ಒಟ್ಟು ರೂ. 3.03 ಕೋಟಿ ಷೇರು ಧನ ಜಮಾ ಆಗಿದೆ. ಪಟ್ಟಣದ ನೆಹರು ರಸ್ತೆ ಹಾಗೂ ಎಪಿಎಂಸಿ ಪ್ರಾಂಗಣದಲ್ಲಿ ಹಾಗೂ ಸಾಗರದ ಎಪಿಎಂಸಿಯಲ್ಲಿ ಒಟ್ಟು ಸುಮಾರು ರೂ. 9 ಕೋಟಿಯಷ್ಟು ಸಂಘ ಸ್ಥಿರಾಸ್ತಿ ಹೊಂದಿದೆ. ಅಲ್ಲದೆ, ಹೊಸನಗರ ಪಟ್ಟಣದ ಮಾವಿನಕೊಪ್ಪ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಒಂದು ಎಕರೆ ಜಮೀನು ಸಹಕಾರಿ ಖರೀದಿಗೆ ಮುಂದಾಗಿದೆ. ಸಹಕಾರಿ ಒಟ್ಟಾರೆ ವಾರ್ಷಿಕ ರೂ. 4,06,67,500 ವಹಿವಾಟು ನಡೆಸಿದ್ದು ರೂ. 65 ಲಕ್ಷ ನಿವ್ವಳ ಲಾಭಗಳಿಸಿ ಷೇರುದಾರರಿಗೆ ಶೇ. 8% ಲಾಭಾಂಶ ಘೋಷಿಸಿದರು. ಸಂಸ್ಥೆ ಒಟ್ಟಾರೆ ಲಾಭದಾಯಕ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಮುಂಬರುವ ವರ್ಷದಲ್ಲಿ ರೂ. 70 ಲಕ್ಷ ನಿವ್ವಳ ಲಾಭ ಗಳಿಸುವ ಗುರಿ ಹೊಂದಿದ್ದು ಪ್ರತಿ ಷೇರುದಾರರು ಸಂಸ್ಥೆಯೊಂದಿಗೆ ಹೆಚ್ಚೆಚ್ಚು ವ್ಯವಹಾರ ಮಾಡುವ ಮೂಲಕ ಆರ್ಥಿಕ ಸಬಲತೆ ಸಾಧಿಸಲು ಸಹಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಪಿ.ಈಶ್ವರಪ್ಪ, ನಿರ್ದೇಶಕರಾದ ಹನಿಯ ರವಿ, ಕುಂಬತ್ತಿ ಕೃಷ್ಣಮೂರ್ತಿ, ಜಗದೀಶ್ ಹುಲಗಾರ್, ದುಮ್ಮ ಗಣಪತಿ, ಬಣ್ಣುಮನೆ ಆದಿತ್ಯ, ನಿವಣೆ ಪ್ರತಿಮಾ ಭಟ್, ವಿದ್ಯಾ ಪೈ ಹಾಗು ಸಾಗರದ ಲೆಕ್ಕಪರಿಶೋಧಕ ಬಿ.ವಿ. ರವೀಂದ್ರನಾಥ್ ಉಪಸ್ಥಿತರಿದ್ದರು.
ಮರಡುಮನೆ ರಾಮಚಂದ್ರ ಸ್ವಾಗತಿಸಿ ನಿರೂಪಿಸಿದರು. ಸಿಇಓ ಹೆದ್ಲಿ ಬಾಲಚಂದ್ರ ವರದಿ ವಾಚಿಸಿ, ಮಂಡಿಸಿದರು. ದೂಗೂರು ರಾಜಶೇಖರ ವಂದಿಸಿದರು.
ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಧಿಕ ಅಂಕ ಗಳಿಸಿದ್ದ ಸಂಘದ ಷೇರುದಾರರ ಮಕ್ಕಳನ್ನು ಆತ್ಮೀಯವಾಗಿ ಸನ್ಮಾನಿಸಿ ಸಂಘ ಪ್ರೋತ್ಸಾಹಿಸಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.