ರಾಮಚಂದ್ರಾಪುರ ಮಠದ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇಗುಲದಲ್ಲಿ ಕೃಷ್ಣಾರ್ಪಣಂ | ಭಗವಂತನ ಆರಾಧನೆಗೆ ಸಮಯ ಮೀಸಲಿಡಿ ; ರಾಘವೇಶ್ವರ ಭಾರತೀ ಶ್ರೀಗಳು

Written by malnadtimes.com

Published on:

ಹೊಸನಗರ ; ಗೋವು ಎಂದರೆ ಚಲನಶೀಲ ಎಂಬರ್ಥವಿದೆ. ಗೋವುಗಳನ್ನು ಕಟ್ಟಿ ಹಾಕಿ ಸಾಕುವ ಬದಲಾಗಿ ಮುಕ್ತವಾಗಿ ವಿಹರಿಸುವಂತಾಗಬೇಕು. ನಮ್ಮ ಈ ಅಪೇಕ್ಷೆಯಂತೆ ಶ್ರೀ ಮಠದಲ್ಲಿ ಬಂಧಮುಕ್ತ ಗೋಶಾಲೆಗಳ ನಿರ್ಮಾಣಕಾರ್ಯ ನಡೆಯುತ್ತಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ರಾಮಚಂದ್ರಾಪುರ ಮಠದ ಗೋಲೋಕ ಗೋಶಾಲೆ ಆವರಣದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿದ್ದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಅವರು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಮಠದ ಗೋಶಾಲೆಯಲ್ಲಿ 7 ಬಂಧಮುಕ್ತ ಗೋಶಾಲೆಗಳು ಈಗಾಗಲೇ ಇವೆ. ಮುಂದಿನ ದಿನದಲ್ಲಿ ದೇವಸ್ಥಾನದ ಆವರಣದಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಗಳು ನಡೆಯಲಿವೆ. ಪ್ರಧಾನ ಮಠದಲ್ಲಿನ ನಿಸ್ವಾರ್ಥ ಮನಸ್ಸಿನ ಕಾರ್ಕರ್ತರ ತಂಡದಿಂದ ಗೋಶಾಲೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ವಿಷ್ಣು ಸಹಸ್ರನಾಮ ಪಠಣದಿಂದ ಸಕಲ ಸಂಕಷ್ಟಗಳೂ ದೂರವಾಗಲಿವೆ. ಮನಸ್ಸು, ಮಾತು ಮತ್ತು ಕೃತಿಯಲ್ಲಿ ಸತ್ಕಾರ್ಯಗಳು ಆಚರಣೆ ಆದಾಗ ಅದರ ಫಲ ಇಮ್ಮಡಿಯಾಗುತ್ತದೆ. ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಸಮರ ಸನ್ನದ್ದ ಸ್ಥಿತಿಯಲ್ಲಿ ರಥ ನಿಲ್ಲಿಸಿ ಗಹನವಾದ ವಿಷಯವನ್ನು ಅರ್ಜುನನಿಗೆ ಅರ್ಥ ಮಾಡಿಸಿದ ಶ್ರೀ ಕೃಷ್ಣ ಮಹಾ ಗುರು. ಅಂದಿನ ಗೀತೋಪದೇಶ ಇಂದಿಗೂ ಪ್ರಸ್ತುತವಾಗಿದೆ ಹಾಗೂ ಸರ್ವರಿಗೂ ಮಾರ್ಗದರ್ಶಿ ಎಂದು ಭಗವದ್ಗೀತೆಯ ಮಹತ್ವ ತಿಳಿಸಿದರು.

ನಾವು ಎಷ್ಟೋ ಬಾರಿ ನಮ್ಮ ದಿನದ ಒಳ್ಳೆಯ ಸಮಯವನ್ನು ವ್ಯರ್ಥ ಮಾಡುತ್ತೇವೆ. ಸದ್ಬಳಕೆ ಮಾಡಿಕೊಂಡು ಭಗವಂತನ ಆರಾಧನೆ ಮಾಡುವುದರಿಂದ ಸತ್ಫಲಗಳು ದೊರೆಯುತ್ತವೆ. ಆಸ್ತಿಕ ಮನೋಭಾವನೆ ದಟ್ಟವಾಗಲಿ ಎಂದು ಭಕ್ತಾದಿಗಳಿಗೆ ಹಾರೈಸಿದರು.

ಗೋಶಾಲೆಯ ವ್ಯವಸ್ಥಾಪಕ ಕೃಷ್ಣಪ್ರಸಾದ್‌ ಯಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಾಯ ಹೆಗಡೆ ದಂಪತಿ ಸುವರ್ಣ ಪಾದುಕಾ ಸೇವೆ ಹಾಗೂ ಸಭಾ ಪೂಜೆ ನೆರವೇರಿಸಿದರು. ಅರಳುಮಲ್ಲಿಗೆ ಪಾರ್ಥ ಸಾರಥಿ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಲೇಖನ ಯಜ್ಞ ನಡೆಯಿತು. ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ ಮೊದಲಾದ ಧಾರ್ಮಿಕ ಕಾರ‍್ಯಗಳು ನೆರವೇರಿದವು. ಗೋಶಾಲೆಗೆ ದೇಣಿಗೆ ನೀಡಿದವರನ್ನು  ಗೌರವಿಸಲಾಯಿತು. ರಾಘವೇಂದ್ರ ಮಧ್ಯಸ್ಥ ಕಾರ‍್ಯಕ್ರಮ ನಿರೂಪಿಸಿದರು.

‘ಸಂಕಷ್ಟ ಸುಖ ಎರಡೂ ಭಗವಂತನ ಇಚ್ಚೆಯಂತೆ ನಡೆಯುತ್ತದೆ. ಕಷ್ಟಗಳು ಸೂರ್ಯನಿಗೆ ಮೋಡಕವಿದಂತೆ. ಇದು ತಾತ್ಕಾಲಿಕ. ಮೋಡ ಸರಿದ ಬಳಿಕ ಮತ್ತೆ ಪ್ರಕಾಶ ಮೂಡುತ್ತದೆ. ಮಠದ ವಿಷಯದಲ್ಲಿಯೂ ಇದು ಅನ್ವಯವಾಗಿದೆ.’
– ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Leave a Comment