ಶಿವಮೊಗ್ಗ: “ನನ್ನ ಕೊನೆಯ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ” ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಮುಂದಿನ ರಾಜಕೀಯ ನಡೆ, ಚುನಾವಣಾ ಸ್ಪರ್ಧೆ ಹಾಗೂ ಪಕ್ಷ ಸೇರ್ಪಡೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ತಮ್ಮ ರಾಜಕೀಯ ಜೀವನಕ್ಕೆ ಆರ್‌ಎಸ್‌ಎಸ್ ಮಾರ್ಗದರ್ಶನ ನೀಡಿದೆ ಎಂದ ಅವರು, ಅದರ ಸಲಹೆಯಂತೆ ಸಮಾಜದ ಪ್ರಮುಖರು ಹಾಗೂ ಹಿತೈಷಿಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು. ಶಿವಮೊಗ್ಗದಲ್ಲಿ ಈಗಾಗಲೇ ಮೂರು ಹಂತಗಳಲ್ಲಿ ಸಭೆಗಳು ನಡೆದಿವೆ ಎಂದರು.
“ಹಿಂದಿನಂತೆ ಮತ್ತೆ ಮೋಸ ಹೋಗಬೇಡಿ ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ. ಆದ್ದರಿಂದ ಪಕ್ಷದಿಂದ ಸ್ಪಷ್ಟ ಭರವಸೆ ದೊರೆತ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಈಶ್ವರಪ್ಪ ಹೇಳಿದರು.
ತಮಗೆ ಕಾಂಗ್ರೆಸ್ ಹಾಗೂ ಜನಸೇನಾ ಪಕ್ಷಗಳಿಂದ ಆಹ್ವಾನ ಬಂದಿದ್ದರೂ ಯಾವುದೇ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದ ಅವರು, ಬಿಜೆಪಿಯೇ ತಮ್ಮ ಅಂತಿಮ ರಾಜಕೀಯ ತಾಣ ಎಂದು ಪುನರುಚ್ಚರಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದ ಈಶ್ವರಪ್ಪ, “ನಾನು ಸ್ಪರ್ಧಿಸಬೇಕೋ ಅಥವಾ ನನ್ನ ಮಗ ಕಾಂತೇಶ್ ಸ್ಪರ್ಧಿಸಬೇಕೋ ಎಂಬುದನ್ನು ಶೀಘ್ರದಲ್ಲೇ ತೀರ್ಮಾನಿಸುತ್ತೇವೆ” ಎಂದರು. ಬಿ.ವೈ. ವಿಜಯೇಂದ್ರ ಅವರು ಕಾಂತೇಶ್ ಅವರೊಂದಿಗೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂದೂ ತಿಳಿಸಿದರು.
ಇದೇ ವೇಳೆ ವಸತಿ ಯೋಜನೆಗಳ ಕುರಿತು ಸರ್ಕಾರದ ವಿರುದ್ಧ ಆರೋಪ ಮಾಡಿದ ಈಶ್ವರಪ್ಪ, ಕಮಿಷನ್ ಸಿಗದ ಕಾರಣ ಬಡವರ ಮನೆ ನಿರ್ಮಾಣ ಕಾಮಗಾರಿಗಳನ್ನು ತಡೆಯಲಾಗಿದೆ ಎಂದು ದೂರಿದರು. ಎಸ್‌ಐಆರ್ ಹಾಗೂ ಮತದಾರರ ಪಟ್ಟಿ ವಿಚಾರದಲ್ಲಿಯೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

