ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಆಗುಂಬೆ ಘಾಟ್ ರಸ್ತೆ ಮತ್ತೆ ಪ್ರಕೃತಿಯ ಕೋಪಕ್ಕೆ ತುತ್ತಾಗಿದೆ. ಐದನೇ ತಿರುವಿನ ಬಳಿ ಧರೆ ಕುಸಿದು, ದೊಡ್ಡ ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಸಂಜೆ ವೇಳೆ ಸಂಭವಿಸಿದ ಈ ಘಟನೆ ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟುಮಾಡಿದೆ. ಮರ ಬಿದ್ದ ಪರಿಣಾಮ ರಸ್ತೆ ಸಂಪೂರ್ಣವಾಗಿ ಮುಚ್ಚಿಕೊಂಡಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಬೆಳಗಿನವರೆಗೆ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.
ಧರೆ ಕುಸಿದ ಭಾಗದಲ್ಲಿ ಕಲ್ಲುಮಣ್ಣು ಮತ್ತು ದೊಡ್ಡ ಮರ ರಸ್ತೆ ಮಧ್ಯದಲ್ಲಿ ಬಿದ್ದಿರುವುದರಿಂದ ತೆರವು ಕಾರ್ಯ ಗೊಂದಲಮಯವಾಗಿದೆ.ಆಗುಂಬೆ ಘಾಟ್ ರಸ್ತೆ ಮಲೆನಾಡು ಹಾಗೂ ಕರಾವಳಿ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಈಗ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರತೀ ಮಳೆಗಾಲದಲ್ಲೂ ಆಗುಂಬೆ ಘಾಟ್‌ನಲ್ಲಿ ಧರೆ ಕುಸಿತ, ಮರ ಬಿದ್ದು ಸಂಚಾರ ತೊಂದರೆ ಉಂಟಾಗುವುದು ಸಾಮಾನ್ಯವಾಗಿಬಿಟ್ಟಿದೆ. ಹಲವು ಬಾರಿ ರಸ್ತೆ ಬ್ಲಾಕ್ ಆಗಿರುವುದರಿಂದ ಪ್ರಯಾಣಿಕರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

