HOSANAGARA ; ಪ್ರಕೃತಿ ಮಡಿಲಲ್ಲಿ ವಿರಾಜಮಾನ ಆಗಿರುವ ತಾಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸು ಮಲೆನಾಡು ಭಾಗದ ಶಕ್ತಿ ದೇವತೆ ಇದ್ದಂತೆ. ಈ ಕಾರಣಕ್ಕೆ ಜನತೆ ಅಮ್ಮನಘಟ್ಟದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಭಕ್ತಾದಿಗಳಗೆ ಕರೆ ನೀಡಿದರು.
ವಿಜಯದಶಮಿ ದಿನದಂದು 30 ಲಕ್ಷ ರೂ. ವೆಚ್ಚದಲ್ಲಿ ಕೋಡೂರು ಸಮೀಪ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಮುಖಮಂಟಪ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಲೆನಾಡು ಭಾಗದ ಈ ಕ್ಷೇತ್ರವನ್ನು ಒಂದು ಮಾದರಿ ಭಕ್ತಿ-ಶಕ್ತಿ ಕೇಂದ್ರವಾಗಿ ನಿರ್ಮಾಣ ಮಾಡುವ ಜೊತೆಗೆ ಸುಂದರ ಪರಿಸರ ಪ್ರವಾಸಿತಾಣ ಆಗಿಸಲು ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೆಚೆಚ್ಚು ಆಸಕ್ತಿ ವಹಿಸಬೇಕಿದೆ. ಹಲವು ಶತಮಾನಗಳ ಇತಿಹಾಸ ಇರುವ ಈ ದೇವಾಲಯಕ್ಕೆ ಭಕ್ತಾದಿಗಳ ದಂಡೆ ಜಾತ್ರೋತ್ಸವ ವೇಳೆಯಲ್ಲಿ ಹರಿದು ಬರುವುದೇ ಇದಕ್ಕೆ ಸಾಕ್ಷಿ ಎಂದರು.
ಕ್ರೈಸ್ತ, ಮುಸ್ಲಿಂ ಸಮುದಾಯಗಳ ಆರಾಧನಾ ಸ್ಥಳದ ಅಭಿವೃದ್ಧಿಗೆ ನೀಡುವಷ್ಟು ಅನುದಾನವನ್ನು ಹಿಂದೂಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರಗಳು ನೀಡದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದ ಅವರು, ಹಿಂದೂ ದೇವಾಲಯಗಳ ಎಲ್ಲಾ ಜುಟ್ಟು, ಜನಿವಾರಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟಿಕೊಂಡಿರುವುದೇ ಅವುಗಳ ಸಮಗ್ರ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ.
ಈ ಕುರಿತು ಶಾಸನಸಭೆಯಲ್ಲಿ ಧ್ವನಿ ಎತ್ತುವ ಅಗತ್ಯವಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ. ಜಿ.ಡಿ.ನಾರಾಯಣಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಸಲ್ಲದು. ಆಸ್ತಿಕರ ಶ್ರದ್ಧಾ, ಭಕ್ತಿ ಕೇಂದ್ರಗಳನ್ನು ರಾಜಕೀಯದಿಂದ ದೂರವೇ ಇಡಬೇಕು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ಈಡಿಗ, ದೀವರ ಜನಾಂಗದ ಮನೆ ದೇವರು ಎಂದೇ ಬಿಂಬಿತಗೊಂಡಿರುವ ಈ ಕ್ಷೇತ್ರಕ್ಕೆ ಸರ್ಕಾರದಿಂದ ಸುಮಾರು 25 ಎಕರೆ ಜಾಗ ಮಂಜೂರಾಗಬೇಕಿದೆ.
ಕೋಡೂರು-ಅಮ್ಮನಘಟ್ಟಕ್ಕೆ ಜನಸಂದಣಿ ತಡೆಯಲು ಸುಸಜ್ಜಿತ ರಸ್ತೆ ನಿಮಾರ್ಣ ಆಗಬೇಕು. ಶ್ರೀ ಕ್ಷೇತ್ರವನ್ನು ಪ್ರಸಿದ್ದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು. ಅಮ್ಮನಘಟ್ಟದಿಂದ ನೀರೇರಿ, ಮಾರುತಿಪುರ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು. ಹಲವಾರು ದಶಕಗಳಿಂದ ಅಮ್ಮನಘಟ್ಟದ ಸುತ್ತಲ ಕೃಷಿ ನಿರತ ರೈತರಿಗೆ ಬಗರ್ ಹುಕುಂ ಜಮೀನು ಮಂಜೂರು ಮಾಡಿಸಬೇಕು ಎಂಬ ಆಗ್ರಹ ಪತ್ರವನ್ನು ಶಾಸಕ ಜ್ಞಾನೇಂದ್ರ ಅವರಿಗೆ ನೀಡಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎ.ವಿ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಪ್ರಮುಖರಾದ ಹರೀಶ್, ನೀರೇರಿ ಸಂತೋಷ್, ಉಸ್ಮಾನ್ ಸಾಬ್, ಮಂಡಾನಿ ಕುಮಾರ್, ನೇರಲೆ ರಮೇಶ್, ನೇರಲೆ ಸ್ವಾಮಿ, ಪುಟ್ಟಪ್ಪ, ಸುಧೀರ್ ಭಟ್, ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೀರೇರಿ ಸಂತೋಷ್ ನಿರೂಪಿಸಿ, ಯೋಗೇಂದ್ರಪ್ಪ ಸ್ವಾಗತಿಸಿ, ಕೋಡೂರು ವಿಜೇಂದ್ರರಾವ್ ವಂದಿಸಿದರು.
ಶಿಲಾನ್ಯಾಸ ನೆರವೇರಿಸಲು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ವ್ಯವಸ್ಥಾಪನಾ ಸಮಿತಿ ಹಲವಾರು ಬಾರಿ ಮನವಿ ಮಾಡಿತ್ತು. ಆದರೆ, ಶಿಲಾನ್ಯಾಸಕ್ಕೆ ಕೈ ಕೊಟ್ಟ ಶಾಸಕ ಬೇಳೂರು ನಡೆ ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳನ್ನು ಸೃಷ್ಟಿಸಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.