ರಿಪ್ಪನ್‌ಪೇಟೆ ; ಪ್ರತಿಯೊಬ್ಬ ಶ್ರಮಿಕರ ಆತ್ಮಸ್ಥೈರ್ಯಕ್ಕೆ ಕುಂದುಂಟು ಮಾಡದೆ, ಅವರ ಹಕ್ಕುಗಳನ್ನು ಗೌರವಿಸುವಂತಹ ಪರಿಪಾಠ ಬೆಳೆಸಿಕೊಂಡಲ್ಲಿ ಸಮಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದಂತಾಗುತ್ತದೆ ಎಂದು ರಿಪ್ಪನ್‌ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ಹೇಳಿದರು.
ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಪಟ್ಟಣದ ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಭವನದಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಹಕ್ಕುಗಳಿಗಾಗಿ ಚಳವಳಿಯ ಮಾದರಿಯಲ್ಲಿ ನಡೆದ ದೀರ್ಘಕಾಲದ ಹೋರಾಟದ ಪ್ರತಿಫಲವನ್ನು ಸ್ಮರಿಸುವ ದಿನ ಮೇ 1 ಎಂದ ಅವರು, 1886 ರ ಅಮೆರಿಕದ ಶಿಕಾಗೋದಲ್ಲಿ ನಡೆದ “ಹೇಮಾರ್ಕೆಟ್ ನಲ್ಲಿ 8 ಗಂಟೆಗಳ ಕೆಲಸದ ದಿನಕ್ಕಾಗಿ ಹೋರಾಟ ನಡೆಸಿದ ಘಟನೆಯಲ್ಲಿ ಬಾಂಬ್ ಸ್ಫೋಟದಲ್ಲಿ ಹಲವು ಕಾರ್ಮಿಕರು ಸಾವನ್ನಪ್ಪಿದರು. ಈ ಕರಾಳ ಘಟನೆ ಕಾರ್ಮಿಕ ಹಕ್ಕುಗಳ ಚಳವಳಿಗೆ ಪ್ರೇರೇಪಿಸಿತು ಎಂದರು.
ಲೇಬರ್ ಕಿಸಾನ್ ಪಕ್ಷದ ನಾಯಕ ಕಾಂರೆಡ್ ಸಿಂಗಾರವೆಲು ಚೆಟ್ಟಿಯಾರ್ ನೇತೃತ್ವದಲ್ಲಿ
1923 ರ ಮೇ 1 ರಂದು ಚೆನ್ನೈನಲ್ಲಿ ಮೊದಲ ಕಾರ್ಮಿಕ ದಿನಾಚರಣೆ ಆಚರಣೆ ಮಾಡಲಾಯಿತು. ಕಾರ್ಮಿಕರ ನೆತ್ತರ ಸಂಕೇತವಾಗಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂಪು ಧ್ವಜ ಬಳಕೆಗೆ ಬಂತು ಎಂಬುದನ್ನು ಸ್ಮರಿಸಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಜನಪರ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸೌಕತ್ ಆಲಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕೆಡಿಪಿ ಸದಸ್ಯ ಆಸೀಫ಼್ ಭಾಷಾ, ಗ್ರಾಮ ಪಂಚಾಯಿತಿ ಸದಸ್ಯ ನಿರೂಪ್ ಕುಮಾರ್, ಸ್ಥಳೀಯ ಮುಖಂಡ ಆರ್ ಎನ್ ಮಂಜುನಾಥ್, ಸಂಘದ ಹಿರಿಯರಾದ ತಮ್ಮಯ್ಯ ಆಚಾರ್, ಬಾಬುಸಾಬ್ ಹಾಗೂ ಸಂಘದ ಉಪಾಧ್ಯಕ್ಷ ಪೈಂಟರ್ ಮುನ್ನಸಾಬ್, ಕಾರ್ಯದರ್ಶಿ ಆರ್ ರಮೇಶ್ ಮತ್ತು ಸದಸ್ಯರು ಇದ್ದರು.