ಬಾಳೆಹೊನ್ನೂರು ; ಮಾನವೀಯ ಮೌಲ್ಯಗಳಿಲ್ಲದ ಜೀವನ ನಿರರ್ಥಕ. ಮೌಲ್ಯಾಧಾರಿತ ಸದ್ಗುಣವಂತರ ಬದುಕು ಆದರ್ಶವಾದುದು. ಸತ್ಯ ಶುದ್ಧ ಕಾಯಕದಿಂದ ಜೀವನ ವಿಕಾಸಗೊಳ್ಳುತ್ತದೆ. ಆದರ್ಶ ವ್ಯಕ್ತಿಗಳ ಸಂಸರ್ಗದಲ್ಲಿ ಬೆಳೆದರೆ ಜೀವನ ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನ ಎನ್ನುವುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ ಧರ್ಮ ಎಂಬ ಹುಟ್ಟು ಅವಶ್ಯಕ. ಬದುಕು ಎಲ್ಲವನ್ನು ಕಲಿಸುತ್ತದೆ. ಆದರೆ ಮನುಷ್ಯನಿಗೆ ಕಲಿಯುವ ಮನಸ್ಸು ಇರಬೇಕಾಗುತ್ತದೆ. ಹಣ್ಣಾಗದಿದ್ದರೂ ಪರವಾಗಿಲ್ಲ. ಆದರೆ ಇನ್ನೊಬ್ಬರ ಬಾಳಿಗೆ ಹುಣ್ಣಾಗಬಾರದು. ಮನುಷ್ಯನಿಗೆ ಬರುವ ಕಷ್ಟಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಸಮಯಕ್ಕೆ ದುಡ್ಡಿಗಿಂತ ಹೆಚ್ಚು ಬೆಲೆಯಿದೆ. ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು. ಆದರೆ ಸಮಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಜ್ಞಾನದಿಂದ ಮನುಷ್ಯನಿಗೆ ಅಧಿಕಾರ ದೊರಕಬಹುದು. ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಬೇಕು. ಹಣ ಹೆಸರುಗಳಿಗೆ ಗುದ್ದಾಡುವುದಕ್ಕಿಂತ ಮಾಡುವ ಕೆಲಸವನ್ನು ಶ್ರದ್ಧೆ ಪ್ರಾಮಾಣಿಕತೆಯಿಂದ ಮಾಡಿದರೆ ಅದು ತಾನಾಗಿಯೇ ಲಭಿಸುತ್ತದೆ. ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.
ಈ ಪವಿತ್ರ ಸಮಾರಂಭದಲ್ಲಿ ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನುಗ್ಗೇಹಳ್ಳಿ ಡಾ|| ಮಹೇಶ್ವರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು ಪಾಲ್ಗೊಂಡು ಗುರು ವಂದನ ನುಡಿ ಪುಷ್ಪಗಳನ್ನು ಅರ್ಪಿಸಿದರು.

ಶಿವಮೊಗ್ಗದ ಮಹೇಶ್ವರಪ್ಪ, ಕೂಡ್ಲಿಗೆರೆ ಮಹೇಶ್ವರಪ್ಪ, ಮೈಸೂರು ಗಣೇಶ ಶಾಸ್ತಿçಗಳು, ಬೆಳಗಾಲಪೇಟೆ, ಸಿದ್ಧಲಿಂಗಯ್ಯ ಶಾಸ್ತಿçಗಳು, ಶ್ರೀ ಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಹೊಸದುರ್ಗದ ಶಿವಲಿಂಗಪ್ಪ ವಕೀಲರು ಮತ್ತು ಕೆ.ಎಸ್.ಕಲ್ಮಠ ವಕೀಲರು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ-ಪ್ರಾರ್ಥನಾ ಗೀತೆ ಜರುಗಿದವು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ದೀಕ್ಷೆ ನೀಡಿ ಆಶೀರ್ವದಿಸಿದರು. ಪ್ರಾತಃಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ಮಾಡಿರುವುದು ಭಕ್ತರ ಭಾವನೆಗಳಿಗೆ ಅತ್ಯಂತ ಸಂತೋಷ ಉಂಟು ಮಾಡಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.