ಜೀವನ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

N.R.PURA ; ಮನುಷ್ಯನಿಗೆ ಬದುಕಿನಲ್ಲಿ ಭರವಸೆ ಮತ್ತು ಕನಸುಗಳು ಇರಬೇಕು. ಧರ್ಮ ಮತ್ತು ಸಂಸ್ಕೃತಿಯ ಆದರ್ಶಗಳನ್ನು ಅನುಸರಿಸಿ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ನಿಶ್ಚಿತ. ಜೀವನ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಭಾನುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ ಹಣಬಲ ತೋಳ್ಬಲ ಇದ್ದರೆ ಸಾಲದು. ಅದರೊಂದಿಗೆ ದೈವ ಬಲವೂ ಮುಖ್ಯ. ಆಶಾವಾದಿ ಕಷ್ಟ ಕಾಲದಲ್ಲೂ ಅವಕಾಶವನ್ನು ಹುಡುಕುತ್ತಾನೆ. ಕಲಿತ ಮನುಷ್ಯ ಮರೆಯಲು ಸಾಧ್ಯವಾಗುವುದಿಲ್ಲ. ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಲಿಂ.ಶ್ರೀ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಶ್ರಮಿಸಿದ್ದನ್ನು ಎಂದಿಗೂ ಮರೆಯಲಾಗದು. ರಚನಾತ್ಮಕ ಗುಣಾತ್ಮಕ ಸತ್ಕಾರ್ಯಗಳಿಂದ ಎಲ್ಲರ ಮನ ಮಂದಿರಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ದೊಡ್ಡದೆಂದು ಭಕ್ತ ಸಮುದಾಯಕ್ಕೆ ಬೋಧಿಸುತ್ತಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದ ಸಾರವನ್ನು ಭಕ್ತ ಸಂಕುಲಕ್ಕೆ ಮನವರಿಕೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ಬದುಕಿ ಬಾಳಿದ್ದರೆ ಇಂದಿಗೆ ನೂರು ವರುಷ ಪರಿಪೂರ್ಣವಾಗುತ್ತಿತ್ತು. ಆದರೆ ಭಗವಂತ ತನಗೆ ಬೇಕೆಂದು ಎತ್ತಿಕೊಂಡ. ಅವರ ಜನ್ಮ ಶತಮಾನೋತ್ಸವ ಶ್ರೀ ರಂಭಾಪುರಿ ಪೀಠದಲ್ಲಿ ವಿದ್ಯುಕ್ತವಾಗಿ ಆಚರಿಸುತ್ತಿರುವುದು ತಮಗೆ ಸಂತೋಷ ತಂದಿದೆ. ಅವರ ಜೀವನಾದರ್ಶಗಳನೊಳಗೊಂಡ ಜೀವನ ಚರಿತ್ರೆ “ಧರ್ಮ ಚೇತನ” ನಾಮಾಂಕಿತದಲ್ಲಿ ಕೃತಿಯೊಂದು ಬಿಡುಗಡೆಗೊಳ್ಳುತ್ತಿರುವುದು ತಮಗೆ ತೃಪ್ತಿಯನ್ನು ತಂದಿದೆ. ಮುಂದಿನ ಆರು ತಿಂಗಳು ವಿವಿಧ ಸಮಾರಂಭಗಳಲ್ಲಿ ಶ್ರೀ ರುದ್ರಮುನಿ ಜಗದ್ಗುರುಗಳ ಜನ್ಮ ಶತಮಾನೋತ್ಸವ ಆಚರಿಸಲಾಗುವುದು. ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿಗಳಾದ ಸಿ.ಎಚ್.ಬಾಳನಗೌಡರು ಮೂರು ದಶಕಕಕ್ಕೂ ಮಿಕ್ಕಿ ಶ್ರೀ ಪೀಠದ ಆದರ್ಶ ಚಿಂತನಗಳನ್ನು ಮಾಧ್ಯಮದವರಿಗೆ ಕಳಿಸುವ ಬಹು ದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಇದೇ ಅಪೂರ್ವ ಸಂದರ್ಭದಲ್ಲಿ ಅವರ ಜನ್ಮ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹಾಗೂ ಅವರ ಜೀವನ ಯಶೋಗಾಥೆ ಸಾರುವ “ಬಾಳ ಹೊಂಗಿರಣ” ಕೃತಿ ಪ್ರಕಟಗೊಳ್ಳುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. ಇದೇ ಸಂದರ್ಭದಲ್ಲಿ ಅವರಿಗೆ “ವಾರ್ತಾ ಸೇವಾ ಸಂಜೀವಿನಿ” ಪ್ರಶಸ್ತಿ ಕೊಟ್ಟು ಆಶೀರ್ವದಿಸಿರುವುದು ತಮಗೆ ಸಂತೋಷ ತಂದಿದೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಹಿಮವತ್ಕೇದಾರ ಜಗದ್ಗುರು ರಾವಲ್ ಪದವಿ ಭೂಷಿತ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ಮಾನವ ಧರ್ಮದ ಹಿರಿಮೆ ಮತ್ತು ಗುರುಸ್ಥಲದ ಉತ್ಕೃಷ್ಠ ವಿಚಾರ ಧಾರೆಗಳನ್ನು ನಿರಂತರ ಬೋಧಿಸಿ ಸಮಾಜಕ್ಕೆ ದಿಕ್ಸೂಚಿಯಾದ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಬಾಳ ಬದುಕು ಶ್ರೇಯಸ್ಸು ಬಯಸುವ ಮನುಷ್ಯನಿಗೆ ದಾರಿ ದೀಪವಾಗಿದೆ. ಶ್ರೀ ಪೀಠದಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವುದು ಧರ್ಮಾಭಿಮಾನಿಗಳಿಗೆ ಹೆಮ್ಮೆಯನ್ನು ಉಂಟು ಮಾಡಿದೆ. ಲಿಂಗೈಕ್ಯ ಜಗದ್ಗುರುಗಳ ದೂರದೃಷ್ಠಿ ಮತ್ತು ಮಾಡಿದ ಸತ್ಕಾರ್ಯಗಳು ಸಕಲರ ಬಾಳಿನಲ್ಲಿ ಬೆಳಕು ಮೂಡಿಸಿವೆ ಎಂದರು.

ಸಮಾರಂಭ ಉದ್ಘಾಟಿಸಿದ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಖಂಡ್ರೆಯವರು ಮಾತನಾಡಿ, ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಅಮೂಲ್ಯ ಸಂದೇಶಗಳನ್ನು ಭಕ್ತ ಸಮುದಾಯದ ಉಜ್ವಲ ಬಾಳಿಗೆ ಬೋಧಿಸಿದ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಘನ ವ್ಯಕ್ತಿತ್ವ ಮರೆಯಲಾಗದು. ಮಾನವ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರ ಶ್ರಮ ಮತ್ತು ಸಾಧನೆ ಎಂದೆಂದಿಗೂ ನಮ್ಮೆಲ್ಲರಿಗೆ ದಾರಿ ದೀಪವಾಗಿದೆ. ಇಂಥ ಅಭೂತ ಪೂರ್ವ ಸಮಾರಂಭ ಉದ್ಘಾಟಿಸಿದ ಸೌಭಾಗ್ಯ ನನ್ನದಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ರಾಜ್ಯದ ಇಂಧನ ಖಾತೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಚಿವರಾದ ಕೆ.ಜೆ.ಜಾರ್ಜ ಅವರು “ರಂಭಾಪುರಿ ಬೆಳಗು” ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಪ್ರತಿಯೊಬ್ಬ ಮನುಷ್ಯನಿಗೆ ಧರ್ಮ ಬೇಕಾಗಿದೆ. ಸುಖ ಶಾಂತಿ ಬದುಕಿಗೆ ಧರ್ಮಾಚರಣೆ ಅಗತ್ಯ. ಭಾರತೀಯ ಉತ್ಕೃಷ್ಟ ಸಂಸ್ಕೃತಿ ಸಂವರ್ಧಿಸುವ ನಿಟ್ಟಿನಲ್ಲಿ ಆಚಾರ್ಯರ ಋಷಿಮುನಿಗಳ ಹಾಗೂ ಸತ್ಪುರುಷರ ಅಮೂಲ್ಯ ಮಾರ್ಗದರ್ಶನ ನಮ್ಮೆಲ್ಲರಿಗೂ ಬೇಕಾಗಿದೆ. ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಎರಡು ದಶಕದ ಅವಧಿಯಲ್ಲಿ ಅಭಿವೃದ್ಧಿ ಪರವಾದ ಹಾಗೂ ಜನ ಹಿತಾತ್ಮಕ ಕಾರ್ಯಗಳನ್ನು ಮಾಡಿದ್ದು ಅವರ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದೆ ಎಂದರು. ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ, ಮಾಜಿ ಸಂಸದ ಮಂಜುನಾಥ ಕುನ್ನೂರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಗೌಡಗಾಂವ ಹಿರೇಮಠದ ಮತ್ತು ಸೊಲ್ಲಾಪುರ ಮಾಜಿ ಲೋಕಸಭಾ ಸದಸ್ಯರಾದ ಡಾ|| ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮದ್ ರಂಭಾಪುರಿ ರುದ್ರಮುನಿ ಜಗದ್ಗುರುಗಳ ಕುರಿತಾದ “ಧರ್ಮ ಚೇತನ” ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಿ.ಎಚ್.ಬಾಳನಗೌಡರ ಜನ್ಮ ಅಮೃತ ಮಹೋತ್ಸವ ಸವಿ ನೆನಪಿಗಾಗಿ ರಚಿತಗೊಂಡ “ಬಾಳ ಹೊಂಗಿರಣ” ಕೃತಿಯನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಬಿಡುಗಡೆ ಮಾಡಿ ಮಾತನಾಡಿದರು.

ಬಂಕಾಪುರ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಎಲ್ಲ ಶ್ರೀಗಳ ಪರವಾಗಿ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಘನ ವ್ಯಕ್ತಿತ್ವವನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು. ಗುಡ್ಡದಮಲ್ಲಾಪುರದ ಮೂಕಪ್ಪ ಶಿವಯೋಗಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಯಾಂತ್ರಿಕ ಆನೆಯನ್ನು ಸಿಯುಪಿಎ ಮತ್ತು ಪಿಇಟಿಎ ಇಂಡಿಯಾ ಸಂಸ್ಥೆಯವರು ಶ್ರೀ ಪೀಠಕ್ಕೆ ಸಮರ್ಪಣೆ ಮಾಡಿ ಆಶೀರ್ವಾದ ಪಡೆದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರು, ಮಾಜಿ ಸಚಿವ ಡಿ.ಎನ್.ಜೀವರಾಜ್, ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಶಿವಮೊಗ್ಗ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥಾಪಕರಾದ ವಿಘ್ನೇಶ್ವರಯ್ಯ ಸೋಲಾಪುರ- ಇಂದಿರಾ, ಕೂಡ್ಲಿಗೆರೆಯ ಜಲಜಾಕ್ಷಮ್ಮ ಮತ್ತು ಮಕ್ಕಳು, ಸವಣೂರಿನ ಡಾ. ಗುರುಪಾದಯ್ಯ ವೀ. ಸಾಲಿಮಠ ಇವರಿಗೆ ವಿಶೇಷ ಗುರುರಕ್ಷೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸಿದರು.

ಈ ಅಪೂರ್ವ ಸಮಾರಂಭದಲ್ಲಿ ನಾಡಿನ ಎಲ್ಲ ಭಾಗಗಳಿಂದ 50ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಅ.ಭಾ.ವೀ.ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ಲೋಕೇಶ್ ಸ್ವಾಗತಿಸಿದರು.

ಕಿತ್ತನಕೆರೆ ಸಿದ್ದಪ್ಪನವರಿಂದ ಭಕ್ತಿಗೀತೆ ಕಾರ್ಯಕ್ರಮ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಜನ್ಮ ಶತಮಾನೋತ್ಸವ ನಿಮಿತ್ಯ ಅವರಶ್ರೀ ರುದ್ರಮುನಿ ಜಗದ್ಗುರುಗಳ ಲಿಂಗ ಸಮಾಧಿಗೆ ರುದ್ರಾಭಿಷೇಕ ವಿಶೇಷ ಪೂಜೆ ಪುಷ್ಪಾಲಂಕಾರ ಮಾಡಲಾಗಿತ್ತು.

ಶ್ರೀ ಸೋಮೇಶ್ವರ ದೇವಸ್ಥಾನದಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಮಂಗಲಮಯ ಭಾವಚಿತ್ರದ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು.

Leave a Comment