ಭದ್ರಾವತಿ ; ಮಾನವ ಜೀವನದ ಶ್ರೇಯಸ್ಸಿಗೆ ನೀತಿ ನಿಯಮಗಳು ಅವಶ್ಯಕ. ಮಾತು ಮನ ಕೃತಿ ಒಂದಾಗಿದ್ದರೆ ಜೀವನದಲ್ಲಿ ಉತ್ಕರ್ಷತೆ ಸುಲಭ ಸಾಧ್ಯ. ಸಂಸ್ಕಾರಯುಕ್ತ ಜೀವನದಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ
ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ಕಲಿತಿರುವುದು ಸ್ವಲ್ಪು ಮಾತ್ರ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬದುಕು ಬಂಧನಕಾರಿ. ಮನುಷ್ಯ ಜೀವನದಲ್ಲಿ ದೇವರು ಮತ್ತು ಮರಣ ಇವೆರಡನ್ನೂ ಮರೆಯಬಾರದು. ನಾವು ಮಡಿದ ಉಪಕಾರ ಮತ್ತು ಪರರು ಮಾಡಿದ ಅಪಕಾರ ಮರೆತು ಬಾಳಬೇಕು. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಗಂಡು ಹೆಣ್ಣು. ಉಚ್ಛ ನೀಚ ಮತ್ತು ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತದಲ್ಲಿ ಜೀವ ಶಿವನಾಗುವ, ಅಂಗ ಲಿಂಗವಾಗುವ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಪ್ರತಿಪಾದಿಸಿದ್ದಾರೆ. ಸೋಮಶೇಖರಯ್ಯ ಮತ್ತು ಶ್ರೀಮತಿ ಲತಾ ದಂಪತಿಗಳವರು ಗ್ರಾಮದ ಎಲ್ಲ ಭಕ್ತರಿಗೂ ಶ್ರೀ ಜಗದ್ಗುರುಗಳವರ ದರ್ಶನಾಶೀರ್ವಾದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಸಂತೋಷದ ಸಂಗತಿ ಎಂದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಗುರು ಹಿರಿಮೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡೇನಂದಿಹಳ್ಳಿ-ದುಗ್ಲಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು.
ರೈತ ಹೋರಾಟಗಾರ ಬಸವರಾಜಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ, ರಾಜಕೀಯ ವಾತಾವರಣ ಬಹಳಷ್ಟು ಕೆಟ್ಟಿದೆ. ಧರ್ಮ ಸಂಸ್ಕೃತಿ ಎತ್ತಿ ಹಿಡಿದ ಕೀರ್ತಿ ಗೌರವ ಪೀಠ ಮಠಗಳಿಗೆ ಸಲ್ಲುತ್ತದೆ. ಸಣ್ಣ ಹಳ್ಳಿಗೂ ಜಗದ್ಗುರುಗಳು ಆಗಮಿಸಿರುವುದು ತಮ್ಮ ಶ್ರದ್ಧೆ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ತಿಮ್ಮಾಪುರ ಹಾಲಶಾಸ್ತ್ರಿಗಳು ನಿರೂಪಿಸಿದರು.
ಬೆಳಿಗ್ಗೆ ಶಿವದೀಕ್ಷಾ ಅಯ್ಯಾಚಾರ ಹಾಗೂ ಲೋಕಕಲ್ಯಾಣಾರ್ಥಕ್ಕಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸಕಲರಿಗೂ ಶುಭ ಹಾರೈಸಿದರು.
ಸಮಾರಂಭಕ್ಕೂ ಮುನ್ನ ಹನುಮಂತಾಪುರ ಗ್ರಾಮದ ಶ್ರೀ ಈಶ್ವರ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ವೀರಾಂಜನೇಯ ದೇವಸ್ಥಾನಗಳಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೇಟಿ ಇತ್ತು ಪೂಜೆ ಸಲ್ಲಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





