ಶಿವಮೊಗ್ಗ: ಕೇಂದ್ರ ಸರ್ಕಾರ ಪದೇಪದೇ ಕರ್ನಾಟಕದ ಮೇಲೆ ಕಸ್ತೂರಿ ರಂಗನ್ ವರದಿಯನ್ನು ಹೇರಲು ಮುಂದಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ಜನರ ಆತಂಕವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವರದಿ ಜಾರಿಯಿಂದ ರೈತರು, ಶರಾವತಿ ಸಂತ್ರಸ್ತರು ಮತ್ತು ಪಶ್ಚಿಮ ಘಟ್ಟ ಭಾಗದ ಜನರ ಬದುಕಿಗೆ ತೊಂದರೆ ಆಗಬಾರದು ಎಂಬ ನಿಲುವಿನಲ್ಲಿ ಸರ್ಕಾರ ಸ್ಪಷ್ಟವಾಗಿದೆ ಎಂದರು.
ಕೇಂದ್ರದ ಧೋರಣೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನಾ ಪಾದಯಾತ್ರೆ ನಡೆಯುತ್ತಿದೆ. ಇಲ್ಲಿನ ಕಾರ್ಯಕ್ರಮದ ನಂತರ ತೀರ್ಥಹಳ್ಳಿಯಲ್ಲಿ ನಡೆಯುವ ಹೋರಾಟದಲ್ಲೂ ಭಾಗವಹಿಸುವುದಾಗಿ ಮಧು ಬಂಗಾರಪ್ಪ ತಿಳಿಸಿದರು.
ಶರಾವತಿ ಸಂತ್ರಸ್ತರ ಸಮಸ್ಯೆಯೂ ಸರ್ಕಾರದ ಗಮನದಲ್ಲಿದೆ. ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಈ ಸಮಸ್ಯೆಯನ್ನು ಹಂತ ಹಂತವಾಗಿ ಇತ್ಯರ್ಥಪಡಿಸುವ ಕೆಲಸ ನಡೆಯುತ್ತಿದೆ. ಒಂದೆಡೆ ಕಸ್ತೂರಿ ರಂಗನ್ ವರದಿ ಭೀತಿ, ಮತ್ತೊಂದೆಡೆ ಶರಾವತಿ ಸಂತ್ರಸ್ತರ ನೋವು — ಈ ಎರಡನ್ನೂ ವ್ಯವಸ್ಥಿತವಾಗಿ ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಅವರು ತಮ್ಮನ್ನು ತಾವು ಪ್ರಧಾನಿ ನರೇಂದ್ರ ಮೋದಿ ಎಂದು ಭಾವಿಸಿಕೊಂಡು ಮಾತನಾಡುತ್ತಿದ್ದಾರೆ. ಆದರೆ ಭಾಷಣದ ಶೈಲಿ ಬದಲಾಗಿದೆಯೇ ಹೊರತು ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಟೀಕಿಸಿದರು.
ಪ್ರತಿಪಕ್ಷವಾಗಿ ಬಿಜೆಪಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಪಾದಯಾತ್ರೆಯಲ್ಲಿ ಕಸ್ತೂರಿ ರಂಗನ್ ವರದಿ ಅಥವಾ ಜನರ ನೈಜ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದೇ ಬಿಜೆಪಿಯ ಕೆಲಸವಾಗಿದೆ ಎಂದು ಹೇಳಿದರು.
ಶಾಸನಸಭೆಗಳಲ್ಲಿ ಜನರ ಸಮಸ್ಯೆಗಳನ್ನು ಪ್ರಶ್ನಿಸುವುದು ಪ್ರತಿಪಕ್ಷದ ಕರ್ತವ್ಯ. ಆದರೆ ಬಿಜೆಪಿ ಅದನ್ನು ಮರೆತಿದೆ ಎಂದು ಮಧು ಬಂಗಾರಪ್ಪ ಕಿಡಿಕಾರಿದರು.
ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಲದಲ್ಲಿ ಜಾರಿಯಾದ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಶಿವಮೊಗ್ಗದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಬಲ ನೀಡಿವೆ ಎಂದು ಅವರು ಸ್ಮರಿಸಿದರು.

