ಹೊಸನಗರ ; ಕಳೆದ ಎರಡು ತಿಂಗಳಿನಿಂದ ತಾಲೂಕಿನ ವಿವಿಧೆಡೆ ಅಕ್ರಮ ಮರಳು ಶೇಖರಣೆ ಮತ್ತು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರುಗಳು ಕೇಳಿಬರುತ್ತಿವೆ. ತಾಲೂಕಿನ ಹಳೇ ಬಾಣಿಗದ ಜೋಡಿ ದೇವಸ್ಥಾನ ಸುತ್ತಮುತ್ತ, ನಂದಿಹೊಳೆ, ಹರಿದ್ರಾವತಿ, ಮುಡುಬ, ಈಚಲಕೊಪ್ಪ, ಮಳವಳ್ಳಿ, ಪಟ್ಟಣಕ್ಕೆ ಸಮೀಪ ಇರುವ ಬ್ಯಾನಗಳಲೆ, ಆನೆಗದ್ದೆ ಗ್ರಾಮದ ಶರಾವತಿ ಹಿನ್ನೀರು ಪ್ರದೇಶ, ಗೊರಗೋಡು ಗ್ರಾಮದ ಸರ್ವೆ ನಂಬರ್ 100ರ ಕಂದಾಯ ಭೂಮಿ ಮೂಲಕ ಶರಾವತಿ ನದಿಗೆ ಹಾದು ಹೋಗುವ ಹಿನ್ನೀರ ಪ್ರದೇಶ, ತ್ರಿಣಿವೆ, ಬೆಣಕಿ, ಕಪ್ಪೆಹೊಂಡ, ಗೊರದಳ್ಳಿ, ಎರಗಿ, ಮಣಸಟ್ಟೆ, ಸಂಪಳ್ಳಿ, ಬಸವಾಪುರ, ವಿಜಾಪುರ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಶೇಖರಣೆ ಮತ್ತು ರಾತ್ರಿ ವೇಳೆಯಲ್ಲಿ ಸಾಗಾಟ ನಿರಂತರವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.
ಜೆಸಿಬಿ, ಹಿಟಾಚಿಗಳಂತ ಭಾರೀ ಯಂತ್ರ ಬಳಕೆ ಮಾಡುವ ಮೂಲಕ, ಸ್ಥಳೀಯ ರೈತರ ಕಂದಾಯ, ಕೃಷಿ ಭೂಮಿಗೆ ಹಾನಿ ಮಾಡಿ, ಮರಳು ಸಾಗಾಟಕ್ಕೆ ಅಕ್ರಮ ರಸ್ತೆ ನಿರ್ಮಿಸಿಕೊಂಡು ರೈತರಲ್ಲಿ ಭಯ ಹುಟ್ಟಿಸುವಂತ ವಾತಾವರಣ ಸೃಷ್ಠಿಸಿ ಪ್ರತಿದಿನ ಹತ್ತಾರು ಟಿಪ್ಪರ್‌ಗಳ ಮೂಲಕ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಶಾಲಾ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ವಯೋವೃದ್ದರು, ವಿಕಲಚೇತನರಿಗೆ ಇದರಿಂದ ಭಾರೀ ತೊಂದರೆ ಆಗುತ್ತಿದ್ದು, ಕೆಲವರಿಗಂತೂ ಶ್ವಾಸಕೋಶದ ತೊಂದರೆ ಕಾಡುತ್ತಿದ್ದೆ ಎನ್ನಲಾಗಿದೆ. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದ್ದು, ಅವರನ್ನು ಬಲಾಡ್ಯರು ತಮ್ಮ ಕಪಿಮುಷ್ಠಿ ಹಿಡಿತದಲ್ಲಿ ಇರಿಸಿಕೊಂಡು ಸೂಕ್ತ ವೇತನ ನೀಡದೆ ಅವರು ಅನಿವಾರ್ಯ ಸ್ಥಿತಿಯಲ್ಲಿ ಕಾಲ ದೂಡುವಂತಾಗಿದೆ.
ಮರಳು ಅಕ್ರಮ ಸಾಗಾಟ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಹತ್ತಾರು ಕೋಟಿ ನಷ್ಟ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ಈವರೆಗೂ ಮೌನ ಮುರಿದಿಲ್ಲವೇಕೆ ?! ಎಂಬ ಯಕ್ಷಪ್ರಶ್ನೆ ನಾಗರೀಕರನ್ನು ಕಾಡಿದೆ. ಅಕ್ರಮ ತಡೆಗೆ ಜಿಲ್ಲಾಡಳಿತ ರೂಪಿಸಿದ್ದ ಪೊಲೀಸ್, ಕಂದಾಯ, ಅರಣ್ಯ ಹಾಗೂ ಲೋಕೊಪಯೋಗಿ ಒಳಗೊಂಡ ಟಾಸ್ಕ್ ಪೋರ್ಸ್ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿದೆ ಇರುವುದೇ ಇದಕ್ಕೆ ಕಾರಣ ಎಂಬ ಮಾತು ಕೇಳಿ ಬಂದಿದೆ.
ಹೊಸನಗರ ತಾಲೂಕು ಒಂದರಲ್ಲೇ ವಾರ್ಷಿಕ 200 ಕೋಟಿ ರೂ. ಮರಳು ಮಾರಾಟ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ, ಇದು ಸರ್ಕಾರಿ ಬೊಕ್ಕಸೆಕ್ಕೆ ಜಮಾ ಆಗದಿರುವುದು ದುರಂತವೇ ಸರಿ. ಶರಾವತಿ ನದಿಯ ಒಡಲನ್ನು ನಿರಂತರವಾಗಿ ಅಗೆಯುತ್ತಿರುವ ಪರಿಣಾಮ ಮುಂಬರುವ ದಿನಗಳಲ್ಲಿ ಭಾರೀ ಹವಾಮಾನ ವೈಫರೀತ್ಯ ಎದುರಿಸ ಬೇಕಾದೀತು ಎಂಬ ಎಚ್ಚರಿಕೆ ಸಂಬಂಧಪಟ್ಟ ಇಲಾಖೆಗಳು ನೀಡಿವೆ.
ಜಿಲ್ಲಾಡಳಿತ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ತಡೆಗೆ ಶೀಘ್ರ ಮುಂದಾಗುವರೆ ಕಾದು ನೋಡುವ ಸರದಿ ಈಗ ಜನತೆಯದ್ದು.
‘ಈ ಕುರಿತು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರಲ್ಲಿ ಕೇಳಿದಾಗ, ಅಕ್ರಮ ತಡೆಯಲು ಪೊಲೀಸ್ ಸಿಬ್ಬಂದಿಗಳಿಗೆ ಪಿಸ್ತೂಲ್ ನೀಡಿದ್ದು, ಅವೆಲ್ಲವನ್ನು ತಮ್ಮ ಟೇಬಲ್ ಮೇಲೆ ತಂದು ಸುರಿಯಲಿ. ಮುಂದೆ ನೋಡೋಣ ಎಂಬ ಉಡಾಫೆ ಉತ್ತರ ನೀಡುತ್ತಾರೆ.’ – ದಾಮೋದರ ಕೋಡೂರು, ಸಮಾಜ ಸೇವಕ