ಧರ್ಮದಿಂದ ಗಳಿಸಿ, ಸಾತ್ವಿಕತೆಯಿಂದ ಬದುಕುವುದು ಜೀವನದ ಗುರಿಯಾಗಲಿ ; ಡಾ.ಗುರುನಾಗಭೂಷಣ ಶ್ರೀಗಳು

Written by malnadtimes.com

Published on:

ಹೊಸನಗರ ; ಧರ್ಮದಿಂದ ಸಂಪತ್ತನ್ನು ಗಳಿಸಿ, ದಾನ, ಪರೋಪಕಾರ ಮಾಡುವುದೇ ನಿಜವಾದ ಜೀವನವಾಗಿದೆ. ಹಣ ಮತ್ತು ಗುಣ ಎರಡೂ ಇದ್ದಾಗ ಜೀವನ ಪರಿಪಕ್ವತೆಯಿಂದ ಕೂಡಿರುತ್ತದೆ ಎಂದು ಎಂದು ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ಬ್ರಹ್ಮೇಶ್ವರದಲ್ಲಿ ಭಾನುವಾರ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು.

ವೀರಶೈವ ಧರ್ಮವು ಸಕಲರಿಗೂ ಲೇಸನ್ನು ಬಯಸುವ ಧರ್ಮ. ಸಮರ ಜೀವನದಿಂದ ಅಮರ ಜೀವನದೆಡೆಗೆ ಕರೆದೊಯ್ಯುವುದೇ ಧರ್ಮದ ಮೂಲ ಆಶಯ ಎಂದರು.

ಸೃಸದ ಬಿ.ವೈ.ರಾಘವೇಂದ್ರ ಸಭಾ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ, ಪುರಾತನ ಕಾಲದ ಧಾರ್ಮಿಕ ತಾಣಗಳನ್ನು ಪುನರ್ ನವೀಕರಣ ಮಾಡುವ ಕಾರ‍್ಯಗಳು ಶ್ರೇಷ್ಠ ಕೆಲಸಗಳಾಗಿವೆ. ಆಸ್ತಿಕರೆಲ್ಲರೂ ಒಗ್ಗೂಡಿದರೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸಮಸ್ಯೆಯೇ ಅಲ್ಲ. ಸಮಭಾವ, ಸಮಚಿತ್ತದಿಂದ ಎಲ್ಲರೂ ಶ್ರಮಿಸುವ ಮೂಲಕ ನೂತನ ದೇಗುಲ ಶ್ರದ್ಧಾಭಕ್ತಿಯ ತಾಣವಾಗಲಿ ಎಂದು ಆಶಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಸ್ತಾಪಿಸಿ, ರಾಣೆಬೆನ್ನೂರು, ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕರ‍್ಯದ ಮೊದಲ ಹಂತ ಮುಗಿದಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕರ‍್ಯ ಆರಂಭಗೊಳ್ಳಲಿದೆ. ಮುಳುಗಡೆ ಸಂತ್ರಸ್ಥರ ದಶಕಗಳ ಬೇಡಿಕೆಯ ಫಲವಾಗಿ ಸಿಗಂದೂರು ಸೇತುವೆ ಜೂನ್ ತಿಂಗಳಿನಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ. ಬೆಕ್ಕೋಡಿ ಸೇತುವೆ ನಿರ್ಮಾಣ ಕರ‍್ಯ ಭರದಿಂದ ಸಾಗಿದೆ ಎಂದರು.

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಅರಿವಿದೆ. ಮಲೆನಾಡು ಭಾಗದಲ್ಲಿ ಟವರ್ ನಿರ್ಮಾಣ ಕರ‍್ಯಕ್ಕೆ ತಾಂತ್ರಿಕ ತೊಂದರೆಗಳಿವೆ. ಈ ಕಾರಣಕ್ಕೆ ಕೊಂಚ ವಿಳಂಬವಾಗಿದೆ. ಆತ್ಮನಿರ್ಭರ್ ಯೋಜನೆಯಡಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರಿಕರಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಕ್ಷೇತ್ರ ವ್ಯಾಪ್ತಿಯಲ್ಲಿ 100 ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಆಗಲಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸನಾತನ ಧರ್ಮದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸುವ ಗುಣವಿದೆ. ಒಳ್ಳೆಯ ಸಂಸ್ಕಾರದಿಂದ ಬದುಕುತ್ತೇವೆ. ಆದ್ದರಿಂದಲೇ ವಿದೇಶೀ ಜನರೂ ಇಲ್ಲಿ ಯಾವುದೇ ತೊಂದರೆ ಆಗದಂತೆ ಜೀವಿಸುವ ವಾತಾವರಣವಿದೆ. ದೇವಸ್ಥಾನಗಳು ಮಾನಸಿಕ ಶಾಂತಿ ನೀಡುವ ತಾಣಗಳಾಗಿವೆ ಎಂದರು.

ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು. ಶಾಸಕ ಬೇಳೂರು ಗೋಪಾಲಕೃಷ್ಣರವರು ಮಾತನಾಡಿ ಸರ್ಕಾರದಿಂದ ದೇವಸ್ಥಾನಕ್ಕೆ ಹಣ ಕೊಡಿಸುವುದರ ಜೊತೆಗೆ ಶಾಸಕರ ನಿಧಿಯಿಂದಲ್ಲೂ ಹಣ ನೀಡುತ್ತೇವೆ ಎಂಬ ಭರವಸೆ ನೀಡಿದರು.

ಎಂ.ಎಲ್.ಸಿ. ಡಾ‌. ಧನಂಜಯ ಸರ್ಜಿ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎನ್.ಸುಧೀರ್, ಆಗಮಶಾಸ್ತ್ರ ಪಂಡಿತ ಪುಟ್ಟಯ್ಯ ಶಾಸ್ತ್ರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅನಿತಾ ರವಿಶಂಕರ್, ಎಂ.ಎಸ್.ಉಮೇಶ್, ಜಬಗೋಡು ಹಾಲಪ್ಪ ಗೌಡ, ಕೆ.ವಿ.ಪ್ರವೀಣ್, ಮಾರುತಿಪುರ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಸದಸ್ಯ ಗಣೇಶ್, ಬಿ ಯುವರಾಜ್, ಚಿಕ್ಕಮಣತಿ ಹಾಲಪ್ಪ, ಮಾವಿನಕಟ್ಟೆ ಶಿವಾನಂದ್, ಚಂದ್ರಮೌಳಿಗೌಡ ಕಲ್ಯಾಣಪ್ಪಗೌಡ, ಮತ್ತಿತರರು ಇದ್ದರು.

ಸಮಿತಿಯ ಕಾರ‍್ಯಾಧ್ಯಕ್ಷ ಬಿ.ಯುವರಾಜ್ ಪ್ರಾಸ್ತಾವಿಕ ಮಾತನಾಡಿದರು. ಹಾಲಪ್ಪ ಚಿಕ್ಕಮಣತಿ ಸ್ವಾಗತಿಸಿದರು. ಸಾಗರದ ಸದ್ಗುರು ಸಂಗೀತ ಶಾಲೆಯ ವಿಧುಷಿ ಶ್ರೀರಂಜಿನಿ ಹಾಗೂ ತಂಡದವರಿಂದ ಸಂಗೀತ ಕಾರ‍್ಯಕ್ರಮ ಏರ್ಪಡಿಸಲಾಗಿತ್ತು.

Leave a Comment