ಹೊಸನಗರ ; ತರಬೇತಿ ವೇಳೆ ಭಾರತೀಯ ವಾಯು ಪಡೆಯ ಅಧಿಕಾರಿ ಮಂಜುನಾಥ್ ಅವರು ಆಕಸ್ಮಿಕವಾಗಿ ಮೃತಪಟ್ಟಿರುವುದು ದೇಶಕ್ಕೆ ಆಗಿರುವ ನಷ್ಟ ಎಂದು ಶಿಕ್ಷಣ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಷಾಧ ವ್ಯಕ್ತಪಡಿಸಿದರು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/15zKqb72kh/
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಂಕೂರು ಗ್ರಾಮದ ಮೃತ ಯೋಧ ಮಂಜುನಾಥ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ, ಧೈರ್ಯ ಹೇಳಿದ್ದೇನೆ. ವಯೋವೃದ್ಧ ತಂದೆ-ತಾಯಿಯರ ಸಂಕಷ್ಟಕ್ಕೆ ಮಿಡಿಯುವುದು ದೇಶಕ್ಕೆ ಹಾಗೂ ಯೋಧರಿಗೆ ನೀಡುವ ಗೌರವವಾಗಿದೆ. ಯೋಧ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ದೊರೆಯಬೇಕಾದ ಅಗತ್ಯ ಸೌಲಭ್ಯಗಳು ಶೀಘ್ರದಲ್ಲಿ ದೊರೆಯಲಿದೆ ಎಂಬ ಆಶಾಭಾವವಿದೆ ಎಂದರು.

ದೇಶ ಕಾಯುವ ಸೈನಿಕನೋರ್ವ ಮೃತಪಟ್ಟರೆ ಅದು ಕೇವಲ ಆತನ ಕುಟುಂಬಕಷ್ಟೇ ಅಲ್ಲ, ಇಡೀ ದೇಶದ ಪ್ರತಿ ಕುಟುಂಬಕ್ಕೂ ಆಗಿರುವ ನಷ್ಟ. ಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಂಜುನಾಥ್ ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರ ಕೋರಿಕೆಯಂತೆ ಮೃತರು ಅಧ್ಯಯನ ಮಾಡಿದ ಶಾಲೆಗೆ ಹೆಚ್ಚುವರಿ ಕೊಠಡಿ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಗ್ರಾಮದಲ್ಲಿ ಯೋಧನ ನೆನಪಿನಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19wXUxcuXz/
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ವಿರೋಧ ಪಕ್ಷದವರು ಈಗ ಯಾಕೆ ಮೌನವಾಗಿದ್ದಾರೆ. ಒಂದು ವೇಳೆ ಈಗ ಲೋಕಸಭಾ ಚುನಾವಣೆಗಳು ನಡೆದಿದ್ದಲ್ಲಿ ಕಾಂಗ್ರೆಸ್‌ಗೆ ಇನ್ನೂ ಆರೇಳು ಸ್ಥಾನಗಳು ಹೆಚ್ಚು ದೊರೆಯುತ್ತಿದ್ದವು. ರಾಜ್ಯ ಸರಕಾರದ ಜನಪರ ಯೋಜನೆಗಳು ಜನರ ವಿಶ್ವಾಸ ಗಳಿಸಿವೆ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುತ್ತೇವೆ ಎಂದು ಘೋಷಿಸಲಿ ಎಂದು ಅವರು ಸವಾಲು ಹಾಕಿದರು.
ಹಿಂದಿನ ಸರಕಾರ ಅಧಿಕಾರದಿಂದ ನಿರ್ಗಮಿಸುವ ವೇಳೆ ಸುಮಾರು 40 ಸಾವಿರ ಕೋಟಿ ರೂ. ಹಣಕಾಸು ಹೊಣೆಗಾರಿಕೆ ಇರಿಸಿತ್ತು. ಚಾಲನೆ ನೀಡಿದ ಯೋಜನೆಗಳಿಗೆ ಹಣವನ್ನು ಒದಗಿಸಿರಲಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕುಂಠಿತಗೊಂಡಿದ್ದ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿಯಾವ ಭಿನ್ನಮತವೂ ಇಲ್ಲ. ಬಿಜೆಪಿಯವರಿಗೆ ಒಡೆದ ಮನೆಯಿರಲಿ, ಮನೆಯೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.

ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ನಿಂದಿಸಿರುವ ಘಟನೆ ಕುರಿತು ಅವರು ಮಾತನಾಡಿ, ಸರಕಾರಿ ಅಧಿಕಾರಿಗಳ ವಿರುದ್ಧ ದೌರ್ಜನ್ಯ ನಡೆಸುವದನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ, ಸದಾಶಿವ ಶ್ರೇಷ್ಠಿ, ಅಶ್ವಿನಿಕುಮಾರ್, ಗುರುರಾಜ್, ಜಯನಗರ ಗುರು ಮತ್ತಿತರರು ಇದ್ದರು.