ಪ್ಯಾರಾಚೂಟ್ ದುರಂತ ; ಮೃತ ಯೋಧ ಮಂಜುನಾಥ್ ನಿವಾಸಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

Written by malnadtimes.com

Updated on:

ಹೊಸನಗರ ; ಫೆ.7ರ ಶುಕ್ರವಾರ ಆಗ್ರದ ವಾಯುಪಡೆ ತರಬೇತಿ ಕೇಂದ್ರದಲ್ಲಿ ನಡೆದ ದುರ್ಘಟನೆಯಲ್ಲಿ ದುರಂತ ಸಾವು ಕಂಡಿದ್ದ ಎಟಿಎಸ್ ತರಬೇತುದಾರ ವಾರೆಂಟ್ ಅಧಿಕಾರಿ ಜಿ.ಎಸ್. ಮಂಜುನಾಥ್ ಅವರ ಸ್ವಗ್ರಾಮ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋರನಗದ್ದೆ ನಿವಾಸಕ್ಕೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬುಧವಾರ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಮೃತನ ಕುಟುಂಬಕ್ಕೆ ನೈತಿಕ ಬಲ ತುಂಬುವ ಪ್ರಯತ್ನ ಮುಂದಾದರು.

WhatsApp Group Join Now
Telegram Group Join Now
Instagram Group Join Now

ಭಾರತೀಯ ವಾಯುಪಡೆಯ ಸ್ಕೈ ಡೈವಿಂಗ್ ತರಬೇತಿ ವೇಳೆ ಮಂಜುನಾಥ್ ಅವರ ಅಕಾಲಿಕ ಸಾವು ದೇಶಕ್ಕೆ ತುಂಬಲಾರದ ನಷ್ಟ. ಆತನ ಕುಟುಂಬ ವರ್ಗ ಶೋಕಸಾಗರದಲ್ಲಿದೆ. ದೇಶ ರಕ್ಷಣಾ ಕಾರ್ಯದಲ್ಲಿ ಮೃತ ಸೇನಾನಿ ಸೇವೆಯನ್ನು ದೇಶದ ನಾಗರೀಕರು ಮರೆಯಬಾರದು. ದೇವರು ಮೃತನ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಿ ಕಾಪಾಡಲಿ ಎಂದು ಮೃತನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿದರು.

ಪ್ರೀತಿಸಿ ಮದುವೆಯಾಗಿದ್ದ ಮೃತ ಮಂಜುನಾಥ ಅವರ ಅಗಲಿಕೆಯಿಂದ ಮೊದಲೇ ನೊಂದಿದ್ದ ಪತ್ನಿ ಕಲ್ಪಿತಾ, ಸಚಿವರು ಸಂತೈಸಲು ಮುಂದಾದಾಗ ಇಡೀ ಕುಟುಂಬವೇ ಒಟ್ಟಾಗಿ ಕಣ್ಣೀರಿಟ್ಟ ದೃಶ್ಯ ಕಲ್ಲೆದೆ ಕರಗುವಂತ್ತಿತ್ತು.

ಈ ವೇಳೆ ಮಂಜುನಾಥ್ ಓದಿದ ಸಂಕೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿ ‌ಸದಸ್ಯರು ಸಚಿವರನ್ನು ಭೇಟಿ ಮಾಡಿ, ಯೋಧನ ಸವಿನೆನಪಿಗಾಗಿ ಆತನ ಹೆಸರಿನಲ್ಲಿ ಸರ್ಕಾರದ ವತಿಯಿಂದ ಹೊಸ ಶಾಲಾ ಕಟ್ಟಡದ ನಿರ್ಮಾಣ ಹಾಗು ಗ್ರಾಮದ ವೃತ್ತದಲ್ಲಿ ಮೃತ ಸೈನಿಕ ಮಂಜುನಾಥನ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.

ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ, ತಿಂಗಳೊಳಗಾಗಿ ಈ ಕುರಿತು ಅಗತ್ಯ ಕ್ರಮಕ್ಕೆ ಮುಂದಾಗಿ, ಇಲಾಖೆಗೆ ವರದಿ ಸಲ್ಲಿಸುವಂತೆ ಶಿಕ್ಷಣಾಧಿಕಾರಿ ಹೆಚ್.ಆರ್‌. ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಈ ಬಗ್ಗೆ ವಿಶೇಷ ಕಾಳಜಿ ವಹಿಸುವ ಇಂಗಿತವನ್ನು ಸಚಿವ ಮಧು ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಅವರ ಪುತ್ರ ರವಿ ಮೃತನ ಕುಟುಂಬಕ್ಕೆ ಧನ ಸಹಾಯದ ಚೆಕ್ ವಿತರಿಸಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19wXUxcuXz/

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸಂಚಾಲಕ ಅಮೀರ್ ಹಂಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಶಾಸಕ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್ ಸೇರಿದಂತೆ ಹಲವಾರು ಹಾಜರಿದ್ದರು.

Leave a Comment