ರಿಪ್ಪನ್‌ಪೇಟೆ ; ಇಂದು ಬೆಳಗ್ಗೆ ಏಕಾಏಕಿ ಬಂದ ಭಾರಿ ಪ್ರಮಾಣದ ಸುಂಟರಗಾಳಿಗೆ ಮನೆಗಳ ಮೇಲ್ಚಾವಣಿ ಮತ್ತು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಧೈರ್ಯ ತುಂಬಿ ವೈಯಕ್ತಿಕ ಪರಿಹಾರ ನೀಡುವ ಮೂಲಕ ಶೀಘ್ರದಲ್ಲಿಯೇ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ವಾಯುಭಾರ ಕುಸಿತದಿಂದಾಗಿ ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ದಿಢೀರ್ ಈ ರೀತಿಯಲ್ಲಿ ಗಾಳಿ ಬೀಸಿದ ಪರಿಣಾಮದಿಂದಾಗಿ ವಿದ್ಯುತ್ ಕಂಬಗಳು ಉರುಳಿ ರಸ್ತೆ ಮೇಲೆ ಬಿದ್ದಿದ್ದರೆ ಮನೆ ಮೇಲೆ ತೆಂಗಿನ ಮರ ಉರುಳಿದ್ದು, ಮನೆಯ ಮೇಲ್ಚಾವಣಿ ಹಾರಿ ಹೋಗಿರುವುದನ್ನು ಕಂಡು ಶಾಸಕ ಗೋಪಾಲಕೃಷ್ಣ ಬೇಳೂರನ್ನು ಕ್ಷಣಕಾಲ ಮೂಕ ವಿಷ್ಮಯರನ್ನಾಗಿಸಿತು.

ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಮಾಡುವಂತೆ ಸೂಚಿಸಿದ ಅವರು, ತುರ್ತಾಗಿ ಸ್ಥಳೀಯ ಗ್ರಾಮಾಡಳಿತದಿಂದ ಮನೆಯ ಮೇಲ್ಚಾವಣಿಗೆ ಹೆಂಚು, ಶೀಟ್ ಮತ್ತು ಇನ್ನಿತರ ಅಗತ್ಯ ಪಾತ್ರೆಗಳು, ಆಹಾರ ಪದಾರ್ಥಗಳನ್ನು ನೀಡುವಂತೆ ಸೂಚಿಸಿದರು.

ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯವರು ಮತ್ತು ಕಾಂಗ್ರೆಸ್ ಮುಖಂಡರು, ಪಿಡಿಒ ನಾಗರಾಜ್, ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.