ಚಿಕ್ಕಮಗಳೂರು ; ಎರಡು ದಿನದ ಮಗುವನ್ನು ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಕಂದಮ್ಮನನ್ನು ಹೆತ್ತ ತಾಯಿಯೇ ಬಿಟ್ಟು ಹೋಗಿದ್ದು, ಗುರುವಾರ ಬೆಳಗಿನಜಾವ 6 ಗಂಟೆಯ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತನ್ನ ಮಗಳನ್ನು ಕರೆದುಕೊಂಡು ಬಂದು ನೋಡಲು ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ.
ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಗ್ರಾಮದ ಅಂಗನವಾಡಿಗೆ ವಿಷಯ ತಿಳಿಸಿದ್ದಾರೆ. ವೈದ್ಯರೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅನಾಥ ಮಗು ಪತ್ತೆಯಾಗಿದ್ದು, ಪೋಷಕರನ್ನು ಪತ್ತೆ ಹಚ್ಚಿಕೊಡುವಂತೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಹಜ ಸ್ಥಿತಿಗೆ ಬಂದ ನಂತರ ದತ್ತು ಕೇಂದ್ರಕ್ಕೆ ಕರೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.