ರಿಪ್ಪನ್ಪೇಟೆ ; ‘ಜೈನ ಧರ್ಮದ ಇಪ್ಪತ್ತಮೂರನೇಯ ತೀರ್ಥಂಕರರಾಗಿ ಶ್ರೀ ಪಾರ್ಶ್ವನಾಥ ಸ್ವಾಮಿ ಶ್ರಾವಣ ಶುಕ್ಲ ಸಪ್ತಮಿಯಂದು ಮೋಕ್ಷ ಪ್ರಾಪ್ತಿ ಮಾಡಿಕೊಂಡರು. ಅವರ ತಪಸ್ಸು, ಜ್ಞಾನ, ಧರ್ಮಪ್ರಜ್ಞೆಯು ಜೀವನದಲ್ಲಿ ಗೃಹಸ್ಥರಿಗೆ ಅಡೆತಡೆಯುಂಟು ಮಾಡುವ ಸಂಘರ್ಷ, ಕಂಟಕಗಳನ್ನು ಪರಿಹರಿಸುವ ಜೀವನ ಸೂತ್ರವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಪ್ರವಚನದಲ್ಲಿ ತಿಳಿಸಿದರು.
‘ದ್ವಾದಶಾಂಗ ಉಪದೇಶಗಳು ಜೀವನ ವ್ಯವಹಾರಕ್ಕೆ ನಂದಾದೀಪವಾಗಿ ಕಾಯ-ವಾಚಾ-ಮನಸಾ ಸದ್ಧರ್ಮ ಚಿಂತನೆಗೆ ಪ್ರೇರಣೆ ನೀಡಿದೆ’ ಎಂದು ಭಕ್ತರನ್ನು ಹರಸಿದರು.
ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಜಿನಮಂದಿರದಲ್ಲಿ ಷೋಡಶೋಪಚಾರ ಪೂಜೆ, ಅಷ್ಟವಿಧಾರ್ಚನೆ ವಿಧಾನಗಳ ಜಿನಾಗಮೋಕ್ತ ಪೂಜಾ ವಿಧಿಗಳನ್ನು ಸ್ವಸ್ತಿಶ್ರೀಗಳವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ನಿರ್ವಾಣ ಲಾಡು ಸಮರ್ಪಣೆ ಮಾಡಲಾಯಿತು.
ಬಳಿಕ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಶ್ರೀ ಪಾರ್ಶ್ವನಾಥ ತೀರ್ಥಂಕರರ ಸ್ತುತಿ, ಸ್ತೋತ್ರಗಳನ್ನು ಪಠಿಸಿದರು. ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ, ಸಹಪುರೋಹಿತರು ಪೂಜಾ ವಿಧಿಗಳನ್ನು ಪರಂಪರಾನುಗತವಾಗಿ ಅನುಷ್ಠಾನಗೊಳಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.